ಮೈಸೂರು: ಅನರ್ಹ ಶಾಸಕ ಹೆಚ್.ವಿಶ್ವನಾಥ್ ಅವರನ್ನು ನನ್ನ ರಾಜಕೀಯ ಜೀವನದಲ್ಲಿ ಯಾಕೆ ದೂರ ಮಾಡಿದೆ ಗೊತ್ತಾ? ಹಲವು ವರ್ಷಗಳಿಂದ ಗೌಪ್ಯವಾಗಿದ್ದ ಸತ್ಯವನ್ನು ಸಾರ್ವಜನಿಕವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಹಿರಂಗ ಪಡಿಸಿದರು.
ಮೈಸೂರು-ಹುಣಸೂರು ರಸ್ತೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ಹುಣಸೂರು ತಾಲೂಕಿನ ಕುರುಬ ಸಮಾಜದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಸಿದ್ದರಾಮಯ್ಯ ಸ್ಫೋಟಕ ಸತ್ಯ ಹೊರಹಾಕಿದ್ದಾರೆ. ಹೆಚ್.ವಿಶ್ವನಾಥ್ ಅವರು ನಾನು ಕಾಂಗ್ರೆಸ್ಗೆ ಬಂದಾಗ ಹುಣಸೂರು ವಿಧಾನಸಭಾ ಚುನಾವಣೆಗೆ ಟಿಕೆಟ್ ಕೇಳಿದರು. ಆ ವೇಳೆಯಲ್ಲಿ ಸಿಟ್ಟಿಂಗ್ ಎಂಎಲ್ಎ ಆಗಿದ್ದ ಮಂಚನಹಳ್ಳಿ ಮಹದೇವು ಅವರ ಮನವೊಲಿಸಿ ಹೆಚ್. ವಿಶ್ವನಾಥ್ಗೆ ಟಿಕೆಟ್ ಕೊಡಿಸಿದೆ. ಆಗ ಅವರು ಸೋತರು. 2009ರಲ್ಲಿ ಪುನಾ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡಿ ಮತ್ತೆ ನಾನು ಚುನಾವಣೆ ಸ್ಪರ್ಧಿಸುವುದಿಲ್ಲವೆಂದು ಕಾಡಿ ಬೇಡಿದರು. ಆಗಲೂ ಕೂಡ ಮಂಚನಹಳ್ಳಿ ಮಹದೇವ ಅವರ ಮನವೊಲಿಸಿ ಎಂಪಿ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡೆವು. 2014ರಲ್ಲಿ ಲೋಕಸಭಾ ಚುನಾವಣೆ ಸೋತ ಹೆಚ್.ವಿಶ್ವನಾಥ್ ಎಂಎಲ್ಸಿ ಮಾಡಿ ಎಂದು ದುಂಬಾಲು ಬಿದ್ದರು. ಆಗ ಅವರಿಗೆ ಬುದ್ದಿ ಹೇಳಿ ಕಳುಹಿಸಿದೆ ಎಂದು ನೆನಪುಗಳನ್ನು ತೆರೆದಿಟ್ಟರು.
ನಂತರ ಜೊತೆಯಲ್ಲೇ ಇದ್ದ ಹೆಚ್. ವಿಶ್ವನಾಥ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದು, ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಾ ಹೇಳಿದ್ರು. ಅದರಿಂದ ನನಗೆ ತುಂಬಾ ಬೇಸರವಾಗಿ ಅಂದಿನಿಂದ ಮಾತೇ ಬಿಟ್ಟೆ ಎಂದು ಸತ್ಯ ಹೊರಹಾಕಿದರು. ಕಾಂಗ್ರೆಸ್‌ನಿಂದ ಹೊರಹೋದ ಹೆಚ್.ವಿಶ್ವನಾಥ್ ಜೆಡಿಎಸ್‌ಗೂ ಮೋಸ ಮಾಡಿದರು. ಅವನೊಬ್ಬ ಸುಳ್ಳು ಹೇಳುವ ವ್ಯಕ್ತಿ. ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಹೆಚ್ ಪಿ ಮಂಜುನಾಥ್ ಗೆಲ್ಲಿಸಿ ಅಂತಾ ಮನವಿ ಮಾಡಿದರು ಸಿದ್ದರಾಮಯ್ಯ.