ಮೈಸೂರು: ಶೂಟೌಟ್ ಪ್ರಕರಣಕ್ಕೆ ತೆರಳಿದ್ದ ವಿಜಯನಗರ ಠಾಣಾ ಇನ್ಸ್ಪೆಕ್ಟರ್ ಸೇರಿದಂತೆ 6 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ನಗರ ಪೊಲೀಸ್ ಕಮಿಷನರ್ ಆದೇಶ ಮಾಡಿದ್ದಾರೆ.
ಕಳೆದ ಗುರುವಾರ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಿಂಗ್ ರಸ್ತೆಯ ಬಳಿ ಹಳೆಯ ನೋಟುಗಳ ವರ್ಗಾವಣೆ ಸಂಬಂಧ ಪಂಜಾಬ್ ಮೂಲದ ವ್ಯಕ್ತಿಯ ಮೇಲೆ ಇನ್ಸ್ಪೆಕ್ಟರ್ ಕುಮಾರ್ ಗುಂಡು ಹಾರಿಸಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈ ಹಿನ್ನೆಲೆ ಅಂದು ಶೂಟ್ನಲ್ಲಿ ಭಾಗಿಯಾಗಿದ್ದ ಇನ್ಸ್ಪೆಕ್ಟರ್ ಕುಮಾರ್ ಅವರನ್ನು ಬೆಂಗಳೂರು ಕೇಂದ್ರ ಕಚೇರಿಗೆ, ಅವರ ಜೊತೆ ಹೋಗಿದ್ದ ಎಸ್ಐ ವೆಂಕಟೇಶಗೌಡ, ಪೇದೆಗಳಾದ ಮಹೇಶ್, ವೀರಭದ್ರ ಇವರಲ್ಲದೇ ಅಂದು ಗರುಡ ವಾಹನದಲ್ಲಿ ಬಂದ ಈರಣ್ಣ ಹಾಗೂ ಚಾಲಕ ಪುನೀತ್ ಎಂಬುವರನ್ನು ನಗರದ ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಶೂಟೌಟ್ ಪ್ರಕರಣದ ಮುನ್ನ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆ ಈ ಸಿಬ್ಬಂದಿ ಕರ್ತವ್ಯಲೋಪ ಮಾಡಿದ್ದಾರೆ. ಹಾಗಾಗಿ ತನಿಖೆ ದೃಷ್ಟಿಯಿಂದ ಇವರನ್ನು ವರ್ಗಾಯಿಸಬೇಕೆಂದು ಸಿಐಡಿ ಕೋರಿಕೆಯ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.