ಮೈಸೂರು: ನಾಡಹಬ್ಬ ದಸರಾ ಅಂಗವಾಗಿ ಯುವ ದಸರಾ ನಾಲ್ಕು ದಿನಗಳ ಕಾಲ ನಡೆಯಲಿದೆ. ಶಿವ ರಾಜ್ಕುಮಾರ್ ಹಾಗೂ ಹಂಸಲೇಖ ಉದ್ಘಾಟನೆ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ಇಂದು ಅರಮನೆ ಆಡಳಿತ ಮಂಡಳಿಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವ ದಸರಾ ಅಕ್ಟೋಬರ್ 18 ರಿಂದ ಅಕ್ಟೋಬರ್ 21ರ ವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಉದ್ಘಾಟಕರಾಗಿ ನಟ ಶಿವ ರಾಜ್ಕುಮಾರ್ ಹಾಗೂ ನಾದಬ್ರಹ್ಮ ಹಂಸಲೇಖ ಭಾಗವಹಿಸಲಿದ್ದಾರೆ. ಗಾಯಕ ಸಂಜಿತ್ ಹೆಗ್ಡೆ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹಾದೇವಪ್ಪ ಉದ್ಘಾಟನೆ ಸಮಾರಂಭದಲ್ಲಿ ಗಣ್ಯರಿಗೆ ಸಾಥ್ ನೀಡಲಿದ್ದಾರೆ. ನಾಲ್ಕು ದಿನಗಳ ಕಾಲ ಸಂಜೆ 6:30 ರಿಂದ 10:30ರ ವರೆಗೆ ಕಾರ್ಯಕ್ರಮ ನಡೆಯಲಿದೆ. ಸಾಧುಕೋಕಿಲ ತಂಡದಿಂದ ಸಂಗೀತ ರಸದೌತಣ ಕಾರ್ಯಕ್ರಮ ಇರಲಿದೆ. ಸ್ಥಳೀಯ ಪ್ರತಿಭೆಗಳ ಜೊತೆಗೆ ಬಾಲಿವುಡ್ ಹಾಡುಗಾರರು ಕೂಡ ಈ ಬಾರಿಯ ಯುವ ದಸರಾದಲ್ಲಿ ಭಾಗವಹಿಸಲಿದ್ದಾರೆ ಎಂದರು.
10 ದಿನ ಫಲಪುಷ್ಪ ಪ್ರದರ್ಶನ: ಅಕ್ಟೋಬರ್ 15 ರಿಂದ 24ರ ವರೆಗೆ ನಗರದ ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಎರಡು ಲಕ್ಷ ಹೂಗಳಿಂದ ಚಂದ್ರಯಾನ ಪರಿಕಲ್ಪನೆಯ ಕಲಾಕೃತಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ಚಾಮುಂಡೇಶ್ವರಿ ದೇವಿ, ದೇವಸ್ಥಾನದ ಗೋಪುರ, ಸುವರ್ಣ ಕರ್ನಾಟಕದ ಶ್ರೀಮಂತ ಪರಂಪರೆ, ಕ್ರೀಡೆ, ಅಂಬಾರಿ ಸೇರಿದಂತೆ ವೈವಿಧ್ಯಮಯ ಆಕರ್ಷಕ ಫಲಪುಷ್ಪಗಳ ಕಲಾಕೃತಿಗಳನ್ನು ಪ್ರದರ್ಶನದಲ್ಲಿ ಅನಾವರಣ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಇಓ ಗಾಯಿತ್ರಿ ಮಾಹಿತಿ ನೀಡಿದರು.
ಇದನ್ನೂ ಓದಿ: 'ನನ್ನೊಂದಿಗೆ ಬಿಜೆಪಿಗರು ಸಂಪರ್ಕದಲ್ಲಿದ್ದಾರೆ, ಸೂಕ್ತ ಸ್ಥಾನಮಾನ ತೀರ್ಮಾನದ ಬಳಿಕ...': ಲಕ್ಷ್ಮಣ್ ಸವದಿ
ಚಿನ್ನದ ಸಿಂಹಾಸನ ವೀಕ್ಷಿಸುವ ಭಾಗ್ಯ: ದಸರಾ 2023ಗೆ ಭರದ ಸಿದ್ಧತೆ ನಡೆಯುತ್ತಿದೆ. ಹಬ್ಬಕ್ಕೆ ದಿನಗಣನೆ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ. ಮೈಸೂರು ಅರಮನೆಯ ದರ್ಬಾರ್ ಹಾಲ್ನಲ್ಲಿ ಚಿನ್ನದ ಸಿಂಹಾಸನವನ್ನು ವೀಕ್ಷಿಸುವ ಅವಕಾಶವನ್ನೂ ಪ್ರವಾಸಿಗರಿಗೆ ಒದಗಿಸಲಾಗಿದೆ. ಟಿಕೆಟ್ ಪಡೆದು ರತ್ನಖಚಿತ ಸಿಂಹಾಸನವನ್ನು ವೀಕ್ಷಿಸಬಹುದು. ಆದರೆ, ಫೋಟೋ - ವಿಡಿಯೋ ಮಾಡುವುದನ್ನು ನಿರ್ಬಂಧಿಸಲಾಗಿದೆ.
ಇದನ್ನೂ ಓದಿ: 'ಮುಂದಿನ 6 ತಿಂಗಳು ಜನರಿಗೆ ಕತ್ತಲೆ ಭಾಗ್ಯ': ಮಾಜಿ ಸಚಿವ ಸುನೀಲ್ ಕುಮಾರ್