ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ನೋಂದಣಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಆದರೆ ತಾಂತ್ರಿಕ ತೊಂದರೆಗಳಿಂದ ಅರ್ಜಿ ಸಲ್ಲಿಸಲು ಮೈಸೂರು ಜಿಲ್ಲೆಯ ಕೆಲವೆಡೆ ಮಹಿಳೆಯರು ಪರದಾಡುತ್ತಿದ್ದಾರೆ. ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಇಂದು ಬೆಳಗ್ಗೆಯಿಂದಲೇ ಜನರು ಕಿಕ್ಕಿರಿದು ತುಂಬಿದ್ದರು. ಆದರೆ, ಒಂದು ಅರ್ಜಿಯನ್ನೂ ಸಹ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ. ಎಲ್ಲೇ ಹೋದರೂ ಸರ್ವರ್ ಬ್ಯುಸಿ ಬರುತಿದೆ ಎಂದು ಸೇವಾ ಕೇಂದ್ರದ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ಮಹಿಳೆಯರು ತಿಳಿಸಿದ್ದಾರೆ.
ಈಗಾಗಲೇ ಫಲಾನುಭವಿಗಳಿಗೆ ಮೊಬೈಲ್ಗೆ ಮೆಸೇಜ್ ಬಂದಿದ್ದು, ಅರ್ಜಿ ಸಲ್ಲಿಸುವಂತೆ ನಾಗರಿಕ ಸೇವಾ ಕೇಂದ್ರಗಳಿಂದ ಕರೆ ಮಾಡಿ ಮಾಹಿತಿ ನೀಡಲಾಗುತ್ತಿದೆ. ಇದೇ ದಿನ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನ ಎಂದು ಎಲ್ಲರಿಗೂ ಹೇಳಲಾಗುತ್ತಿತ್ತು. ಇದರಿಂದಾಗಿ ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.
ಗ್ರಾಮ ಪಂಚಾಯಿತಿಗಳಿಗೆ ಹೋಗಿ ವಿಚಾರಿಸಿದರೆ, ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಾರೆ. ನಾವು ಬೆಳಗ್ಗೆಯಿಂದಲೇ ಕಚೇರಿಗಳಿಂದ ಕಚೇರಿಗೆ ಅಲೆದಾಡುತ್ತಿದ್ದೇವೆ. ಕೂಡಲೇ ದೋಷ ಸರಿಪಡಿಸಬೇಕು ಎಂದು ಮಹಿಳೆಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆಗಸ್ಟ್ 16ರಿಂದ ಗೃಹಲಕ್ಷ್ಮಿ ಹಣ: ಯೋಜನೆಯ ಪ್ರಕಾರ, ರಾಜ್ಯದ ಪತ್ರಿ ಕುಟುಂಬದಲ್ಲಿನ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂ. ನಂತೆ ವರ್ಷಕ್ಕೆ 24 ಸಾವಿರ ರೂ ಜಮೆಯಾಗಲಿದೆ. ಒಟ್ಟು ಲೆಕ್ಕಾಚಾರದ ಪ್ರಕಾರ ಯೋಜನೆಯಿಂದ 1.28 ಕೋಟಿ ಮಹಿಳೆಯರಿಗೆ ಪ್ರಯೋಜನವಾಗಲಿದೆ. ಆಗಸ್ಟ್ 16ರಿಂದ ಯೋಜನೆ ಜಾರಿಗೆ ಬರಲಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ನೊಂದಿರುವ ನಾಡಿನ ನನ್ನ ತಾಯಂದಿರ, ಅಕ್ಕ ತಂಗಿಯರ ಆರ್ಥಿಕ ಹೊರೆಯನ್ನು ತುಸು ತಗ್ಗಿಸಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನೆರವಾಗುವ ದೃಷ್ಟಿಯಿಂದ ನಾವು ಘೋಷಣೆ ಮಾಡಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದೇನೆ' ಎಂದು ತಿಳಿಸಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಮಮತಾ ಬ್ಯಾನರ್ಜಿ, ಸ್ಟಾಲಿನ್ ಅವರು ಸಿಕ್ಕಾಗ ನಮ್ಮ ಯೋಜನೆಗಳನ್ನು ಅವರ ರಾಜ್ಯದಲ್ಲಿ ಜಾರಿ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದರು. ಇದು ಕರ್ನಾಟಕದ ಮಾಡೆಲ್ ಎಂದು ತಮ್ಮ ಯೋಜನೆಯ ಕುರಿತು ಸಾರ್ಥಕ ಮಾತುಗಳನ್ನಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ನೋಂದಣಿಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಆಗಸ್ಟ್ 16ರಿಂದ ಯಜಮಾನಿಯ ಖಾತೆಗೆ ₹2,000 ಜಮೆ