ಮೈಸೂರು: ಸಾ. ರಾ ಕಲ್ಯಾಣ ಮಂಟಪವು ಯಾವುದೇ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿಲ್ಲ ಎಂದು ವರದಿ ನೀಡಲಾಗಿದೆ ಎಂದು ಸ್ವತಃ ವರದಿಯನ್ನು ಸಾ.ರಾ ಮಹೇಶ್ ಓದಿದ್ದಾರೆ. ಈ ಮೂಲಕ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ, ಸರ್ಕಾರಿ ಯಂತ್ರವನ್ನು ದುರಪಯೋಗಪಡಿಸಿಕೊಂಡು ನಮ್ಮ ಮೇಲೆ ಆರೋಪ ಮಾಡಿದ್ದೀರಿ, ನಾನು ಮಾಡಿದ ಚಾಲೆಂಜ್ ಗೊತ್ತಿದೆಯೇ ನಿಮಗೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಮೇಲೆ ನಿರ್ಗಮಿತ ಜಿಲ್ಲಾಧಿಕಾರಿಗಳು ಮಾಡಿರುವ ಆರೋಪ ಹಾಗೂ ಸಾ. ರಾ ಕಲ್ಯಾಣ ಮಂಟಪವು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿದೆ ಎಂಬ ಆರೋಪದ ಬಗ್ಗೆ ಸರ್ವೆ ಅಧಿಕಾರಿಗಳ ತಂಡ ತನಿಖೆ ನಡೆಸಿದೆ.
ಇದೀಗ ಯಾವುದೇ ರೀತಿಯ ಒತ್ತುವರಿ ಆಗಿಲ್ಲ. ಕಾನೂನು ಕ್ರಮದಂತೆಯೇ ನಿರ್ಮಿಸಲಾಗಿದೆ ಎಂದು ದಾಖಲಾತಿಗಳನ್ನು ಹಾಗೂ ವರದಿಯನ್ನು ಓದುವ ಮೂಲಕ ಸಾ. ರಾ ಮಹೇಶ್ ಮತ್ತೊಮ್ಮೆ ಸಿಂಧೂರಿ ವಿರುದ್ದ ಕಿಡಿಕಾರಿದರು.
ನನ್ನ ಜೀವನದಲ್ಲಿ ಎಂದೂ ನೋಡಿಲ್ಲ: ನಿಮ್ಮ ಪತಿ ಆಸ್ತಿಯ ಮಾಹಿತಿಯನ್ನು ಕೊಟ್ಟಿಲ್ಲ. ಸರ್ಕಾರಿ ಯಂತ್ರವನ್ನು ದುರಪಯೋಗಪಡಿಸಿಕೊಂಡು ನಮ್ಮ ಮೇಲೆ ಆರೋಪ ಮಾಡಿದ್ದೀರಿ. ನಾನು ಮಾಡಿದ ಚಾಲೆಂಜ್ ಗೊತ್ತಾ ನಿಮಗೆ?, ನಿಮಗೆ ಮನಃಸಾಕ್ಷಿ ಇದ್ದರೆ ಮತ್ತೆ ಕುಳಿತು ಯೋಚಿಸಿ. ನಿಮ್ಮಂತ ಅಧಿಕಾರಿಯನ್ನು ನಾನು ನನ್ನ ಜೀವನದಲ್ಲಿ ಎಂದೂ ನೋಡಿಲ್ಲ ಎಂದ ಅವರು, ಸಾಮಾಜಿಕ ಜಾಲತಾಣದಲ್ಲಿ "ಕಮ್ ಬ್ಯಾಕ್ ರೋಹಿಣಿ " ಎಂದು ಕರೆದು ವ್ಯಂಗ್ಯವಾಡಿದರು.
ಮೃತ ಕುಟುಂಬಗಳಿಗೆ ಅನ್ಯಾಯ: ನೀವು ಮುಖ್ಯ ಕಾರ್ಯದರ್ಶಿ ನೀಡಿರುವ ವರದಿ ಮೇಲೆ ವರ್ಗಾವಣೆಯಾಗಿದ್ದೀರಿ. ಅದನ್ನು ಬಿಟ್ಟು ನನ್ನ ತೇಜೊವಧೆಗೆ ಇಲ್ಲ ಸಲ್ಲದ ಆರೋಪ ಮಾಡಿದ್ದೀರಿ. ಕೋವಿಡ್ ಸಮಯದಲ್ಲೂ ಸಾವಿನ ಲೆಕ್ಕವನ್ನು ಮುಚ್ಚಿಟ್ಟು ಸಾವನ್ನಪ್ಪಿದ ಕುಟುಂಬಕ್ಕೆ ದ್ರೋಹ ಮಾಡಿದ್ದೀರಿ. ಈಗ ಸರ್ಕಾರ ಕೋವಿಡ್ನಿಂದ ಮೃತಪಟ್ಟ ಬಿ.ಪಿ.ಎಲ್ ಕುಟುಂಬಗಳಿಗೆ 1 ಲಕ್ಷ ರೂ ಪರಿಹಾರ ನೀಡುತ್ತಿದ್ದು, ಈಗ ನಿಮ್ಮ ಸುಳ್ಳು ಲೆಕ್ಕದಿಂದ ಮೃತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಓದಿ: ಪಾಸಿಟಿವಿಟಿ ದರ ಶೇ 4.56 ಕ್ಕೆ ಇಳಿಕೆ: 6,835 ಜನರಿಗೆ ಸೋಂಕು ದೃಢ