ಮೈಸೂರು: ಜಿಲ್ಲೆಯಲ್ಲಿ ಭೌಗೋಳಿಕ ಮಹತ್ವ ಹೊಂದಿರುವ ನಂಜನಗೂಡು ರಸಬಾಳೆ, ಮೈಸೂರು ವೀಳ್ಯೆದೆಲೆ, ಮೈಸೂರು ಸಿಲ್ಕ್ ಸೀರೆ ಮುಂತಾದ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗಾರಿಕೆಗಳಿಗೆ ಸಂಬಂಧಿಸಿದ ಏಕಗವಾಕ್ಷಿ ಸಮಿತಿ ಸಭೆ, ಕೈಗಾರಿಕೆಗಳ ಕುಂದು ಕೊರತೆ ಸಭೆ ಹಾಗೂ ರಫ್ತು ಉತ್ತೇಜನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರಿನಿಂದ ಹೆಚ್ಚು ರಫ್ತು ಮಾಡುವ ಬಗ್ಗೆ ಯೋಜನೆ ರೂಪಿಸಿ ವರದಿ ತಯಾರಿಸಿ ಡಿಸೆಂಬರ್ ಅಂತ್ಯದ ಒಳಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಕೈಗಾರಿಕಾಭಿವೃದ್ಧಿ ವಲಯಗಳಲ್ಲಿ ಕೆಲವು ನಿವೇಶನಗಳಿಗೆ ಅಧಿಕ ಬೆಲೆ ನಿಗದಿಪಡಿಸಲಾಗಿದೆ. ಅದನ್ನು ಸರಿಪಡಿಸಬೇಕು ಎಂದು ಕೈಗಾರಿಕೋದ್ಯಮಿಗಳು ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಿಗೆ ತಿಳಿಸಿದರು.
ಕೈಗಾರಿಕೋದ್ಯಮಿಗಳ ಕುಂದು ಕೊರತೆ ಆಲಿಸುವ ಸಭೆಯನ್ನು ಪ್ರತಿ ತಿಂಗಳ ಡಿಐಸಿಯ ಜಂಟಿ ನಿರ್ದೇಶಕರೇ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.