ನಂಜನಗೂಡು (ಮೈಸೂರು): ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ, ರಾಕಿಂಗ್ ಸ್ಟಾರ್ ಯಶ್ ಮೈಸೂರಿಗೆ ಭೇಟಿ ಕೊಟ್ಟಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಮತ್ತು ಮಕ್ಕಳು ಐರಾ, ಯಥರ್ವ್ ಜೊತೆ ಆಗಮಿಸಿ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.
ನಂಜುಂಡೇಶ್ವರನಿಗೆ ವಿಶೇಷ ಪೂಜೆ: ದಕ್ಷಿಣ ಕಾಶಿ ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಕುಟುಂಬ ಸಮೇತ ಆಗಮಿಸಿದ ರಾಕಿಂಗ್ ಸ್ಟಾರ್ ಯಶ್ ಶ್ರೀ ನಂಜುಂಡೇಶ್ವರ ಸ್ವಾಮಿ ಮತ್ತು ಪಾರ್ವತಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಮಕ್ಕಳು ನಟನಿಗೆ ಸಾಥ್ ನೀಡಿದರು. ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.
ಸ್ಕ್ರಿಪ್ಟ್ ರೆಡಿ, ಶೀಘ್ರವೇ ಸಿನಿಮಾ ಅನೌನ್ಸ್: ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್, ಜನರು ದುಡ್ಡು ಕೊಟ್ಟು ಸಿನಿಮಾ ನೋಡುತ್ತಾರೆ. ಪ್ರೇಕ್ಷಕರು ಉಚಿತವಾಗಿ ಸಿನಿಮಾ ನೋಡುವುದಿಲ್ಲ. ಅವರು ಕೊಡುವ ದುಡ್ಡಿಗೆ ನ್ಯಾಯ ಒದಗಿಸುವಂತಹ ಸಿನಿಮಾ ಮಾಡಬೇಕು. ಆ ನಿಟ್ಟಿನಲ್ಲಿ ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದೆ. ಶೀಘ್ರವೇ ಹೊಸ ಸಿನಿಮಾ ಅನೌನ್ಸ್ ಮಾಡುತ್ತೇನೆ ಎಂದು ತಿಳಿಸಿದರು.
ಒಂದೊಳ್ಳೆ ಸಿನಿಮಾ ರೆಡಿ ಆಗಬೇಕು.. ದೇವರ ಸನ್ನಿಧಿಯಲ್ಲಿ ಇದ್ದೇನೆ. ಸುಮ್ಮನೇ ತೇಲಿಸುವ ಮಾತನ್ನು ಆಡಬಾರದು. ಜನರು ದುಡ್ಡು ಕೊಟ್ಟು ಸಿನಿಮಾ ನೋಡುವ ನಿಟ್ಟಿನಲ್ಲಿ ಒಂದೊಳ್ಳೆ ಸಿನಿಮಾ ರೆಡಿ ಆಗಬೇಕು. ಆ ದೃಷ್ಟಿಯಿಂದ ಒಂದು ಕ್ಷಣವೂ ವ್ಯರ್ಥ ಮಾಡದೇ ಸಿನಿಮಾಗಾಗಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ಸ್ಕ್ರಿಪ್ಟ್ ಕೂಡ ರೆಡಿಯಾಗುತ್ತಿದೆ. ಆದಷ್ಟು ಬೇಗ ಹೊಸ ಚಿತ್ರದ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಯಶ್ ಹೇಳಿದರು.
ಬಾಲಿವುಡ್ಗೆ ಹೋಗಲ್ಲ: ಬಾಲಿವುಡ್ಗೆ ಹೋಗುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಇರುವ ಕಡೆ ಎಲ್ಲರನ್ನೂ ಕರೆಸಿಕೊಳ್ಳುತ್ತೇನೆ. ನಾನು ಎಲ್ಲೂ ಹೋಗುವುದಿಲ್ಲ, ಡೋಂಟ್ ವರಿ ಎಂದು ತಿಳಿಸಿದರು.
ಮೂರು ದಿನಗಳಿಂದ ಮೈಸೂರು ಪ್ರವಾಸ: ಕಳೆದ ಮೂರು ದಿನಗಳಿಂದ ತಮ್ಮ ಕುಟುಂಬದ ಜೊತೆ ಮೈಸೂರು ಜಿಲ್ಲೆಯ ಪ್ರವಾಸದಲ್ಲಿದ್ದು, ನಿನ್ನೆ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಸಫಾರಿ ನಡೆಸಿದ್ದಾರೆ. ಇಂದು ಬೆಳಗ್ಗೆ ದಕ್ಷಿಣ ಕಾಶಿ ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದಿದ್ದಾರೆ.
ಇದನ್ನೂ ಓದಿ: 'ಹನುಮಂತ ದೇವರಲ್ಲ': ಪೊಲೀಸರ ಭದ್ರತೆಯಲ್ಲಿರುವಾಗ ಆದಿಪುರುಷ್ ಸಂಭಾಷಣೆ ಬರಹಗಾರ ಮನೋಜ್ ಮುಂತಶಿರ್ ಶುಕ್ಲಾ ಹೇಳಿಕೆ
ಮಕ್ಕಳು ಸಫಾರಿ ಎಂಜಾಯ್ ಮಾಡಿದ್ದಾರೆ: ಮೈಸೂರು ಪ್ರವಾಸ ತುಂಬಾ ಚೆನ್ನಾಗಿದೆ. ನಿನ್ನೆ ಕಾಡಿನಲ್ಲಿ ಮಕ್ಕಳೊಂದಿಗೆ ಮೊದಲ ಸಫಾರಿ ಮಾಡಿದೆವು, ಬಹಳ ಚೆನ್ನಾಗಿತ್ತು. ಎಲ್ಲರೂ ಎಂಜಾಯ್ ಮಾಡಿದೆವು. ಸಫಾರಿಯಲ್ಲಿ ಜಿಂಕೆ, ಕರಡಿ, ಆನೆ ಎಲ್ಲವನ್ನೂ ನೋಡಿದೆವು. ಆದರೆ ಹುಲಿ ಸಿಗಲಿಲ್ಲ, ಬೇಜಾರಾಯಿತು. ಇಂದು ಕೂಡ ಸಫಾರಿಗೆ ಹೋಗಬೇಕಿತ್ತು. ಆದರೆ ಮಳೆ ಕಾರಣ ಹೋಗಲಿಲ್ಲ. ಮುಂದಿನ ದಿನಗಳಲ್ಲಿ ಎಂದಾದರು ಸಫಾರಿ ನೋಡಿದರಾಯಿತು ಎಂದು ಬಂದೆವು ಎಂದು ರಾಕಿಂಗ್ ಸ್ಟಾರ್ ತಿಳಿಸಿದರು.
ಇದನ್ನೂ ಓದಿ: International Yoga Day 2023: ಡಾ. ರಾಜ್ಕುಮಾರ್ ಯೋಗ ಕಲಿತಿದ್ದು ಯಾಕೆ ಗೊತ್ತೇ?