ಮೈಸೂರು: ಧರ್ಮವನ್ನು ನಾವು ರಕ್ಷಣೆ ಮಾಡಿದರೆ ಆ ಧರ್ಮ ನಮ್ಮನ್ನೆಲ್ಲಾ ರಕ್ಷಣೆ ಮಾಡುತ್ತದೆ. ಹಾಗೆಯೇ ಯೋಗವನ್ನು ಅಭ್ಯಾಸ ಮಾಡಿದರೆ ಯೋಗ ನಮ್ಮನ್ನೆಲ್ಲ ರಕ್ಷಣೆ ಮಾಡುತ್ತದೆ. ವಿಜ್ಞಾನದ ಮೂಲಕ ರೆವಲ್ಯೂಷನ್ ಮಾಡುವ ಆಧುನಿಕ ಯುಗದಲ್ಲಿ ಯೋಗದ ಮುಖಾಂತರ ಎವಲ್ಯೂಷನ್ ಆಗಬೇಕಾಗಿದೆ ಎಂದು ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಇಂದು ವಿಶ್ವ ಯೋಗ ದಿನದ ಪ್ರಯುಕ್ತ ಮೈಸೂರಿನ ಯೋಗ ಆಚರಣೆಯಲ್ಲಿ ಆದಿಚುಂಚನಗಿರಿ ಶ್ರೀಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಭಾಗವಹಿಸಿದ್ದರು. ಯೋಗ ನಗರಿ, ಸಾಂಸ್ಕೃತಿಕ ನಗರಿ, ಸ್ವಚ್ಛ ನಗರಿಯೂ ಆಗಿರುವ ಮೈಸೂರಿನಲ್ಲಿ ಸಾವಿರಾರು ಸಂಖ್ಯೆಯ ಜನರು ಸೇರಿ ಯೋಗ ಮಾಡಿದ್ದಾರೆ. ಈ ಮೂಲಕ ಪತಂಜಲಿ ಮಹರ್ಷಿಗಳು ಕೊಟ್ಟ ಅಷ್ಟಾಂಗ ಯೋಗವನ್ನು ಜಗತ್ತಿನಾದ್ಯಂತ ಎತ್ತಿ ಹಿಡಿಯುವ ಕೆಲಸವನ್ನು ಮಾಡಿರುವುದು ಸಂತೋಷದ ವಿಷಯ. ಯೋಗದಿಂದ ದೇಹ ಹಾಗೂ ಮನಸ್ಸಿನ ಜೊತೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ನಿರ್ಮಲಾನಂದನಾಥ ಸ್ವಾಮಿಜಿ ತಿಳಿಸಿದರು.
ಆಗ ಮಾತ್ರ ವ್ಯಕ್ತಿತ್ವ ಪೂರ್ಣ ವಾಗುತ್ತದೆ ಎಂದರು ನಮಗೆ ಪತಂಜಲಿ ಮಹರ್ಷಿಗಳು ಹೇಳಿಕೊಟ್ಟ ಯೋಗವನ್ನು ಉಳಿಸಿಕೊಂಡು ಹೋಗಬೇಕಾಗಿದೆ. ಆಧುನಿಕ ಯುಗದಲ್ಲಿ ಯೋಗಕ್ಕೆ ಹೊಸ ರೂಪ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಡಿನ ಸಮಸ್ತ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.