ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಂದೆಯವರು ಯಾವ ಕ್ಷೇತ್ರದಲ್ಲಿ ನಿಂತರೂ ನಾನು ಅವರ ಪರ ನಿಂತು ಪ್ರಚಾರ ಮಾಡಿ ಗೆಲ್ಲಿಸುತ್ತೇನೆ, ಕೊನೆಗೆ ಅವರು ವರುಣಾ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದರೆ ತಂದೆಗಾಗಿ ಕ್ಷೇತ್ರವನ್ನು ತ್ಯಾಗ ಮಾಡಲೂ ನಾನು ಸಿದ್ಧನಿದ್ದೇನೆ ಎಂದು ಸಿದ್ದರಾಮಯ್ಯನವರ ಪುತ್ರ, ಶಾಸಕ ಯತೀಂದ್ರ ಸಿದ್ದರಾಮಯ್ಯನವರು ಮೈಸೂರಿನಲ್ಲಿ ಹೇಳಿದರು.
ಮೈಸೂರಿನ ಲಲಿತಾದ್ರಿಪುರದ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಆಗಮಿಸಿದ ಯತೀಂದ್ರ ಸಿದ್ದರಾಮಯ್ಯನವರು, ಅಲ್ಲಿನ ಜನರ ಅಹವಾಲನ್ನು ಆಲಿಸಿ, ಕೆ.ಆರ್ ಕ್ಷೇತ್ರದ ಜನತೆಗೆ ವರುಣಾ ಕ್ಷೇತ್ರಕ್ಕೆ ಸೇರಿರುವ ಜಾಗದಲ್ಲಿ ಅವರಿಗೆ ಅಕ್ರಮವಾಗಿ ಆಶ್ರಯ ಮನೆ ನಿರ್ಮಾಣ ಮಾಡಿಕೊಡುತ್ತಿದ್ದಾರೆ, ಇದು ಸರಿಯಲ್ಲ, ಇದರ ವಿರುದ್ಧ ನಾನು ಮೂಡಾಗೆ, ಕಮೀಷನರ್ಗೆ ಹಾಗೂ ಹೌಸಿಂಗ್ ಬೋರ್ಡ್ಗೆ ಪತ್ರ ಬರೆದಿದ್ದೇನೆ, ಇದರ ಬಗ್ಗೆ ನನಗೆ ತಿಳಿದಿಲ್ಲ. ಇದು ಅಕ್ರಮವಾಗಿ ನಡೆಯುತ್ತಿದೆ ಮತ್ತು ಈ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿರುವುದನ್ನ ನೋಡಿದರೆ ಇಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ತಿಳಿಯುತ್ತದೆ ಎಂದರು.
ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತಂದೆಯವರ ಕೋಲಾರ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್ ಏನು ಹೇಳಿದೆಯೋ ನನಗೆ ಗೊತ್ತಿಲ್ಲ, ಸ್ಪರ್ಧೆ ವಿಚಾರದಲ್ಲಿ ನಮ್ಮ ತಂದೆಯವರು ನನಗೆ ಏನು ಹೇಳಿಲ್ಲ, ತಂದೆಯವರು ಬೆಂಗಳೂರಿಗೆ ಬಂದ ತಕ್ಷಣ ನಾನು ಅವರೊಂದಿಗೆ ಮಾತನಾಡುತ್ತೇನೆ, ನಾನು ಮಾಧ್ಯಮಗಳಲ್ಲಿ ಈ ವಿಚಾರ ನೋಡಿದೆ. ತಂದೆಯವರೂ ಎಲ್ಲಿ ನಿಂತರು ಗೆಲ್ಲುತ್ತಾರೆ, ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರೇ ನಾನು ಕ್ಷೇತ್ರ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಎಲ್ಲಿ ನಿಂತರು ವಿರೋಧಿಗಳು ಒಂದಾಗುತ್ತಾರೆ: ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೂ ಅಲ್ಲಿ ಅವರು ಗೆಲ್ಲುತ್ತಾರೆ ಎಂದ ಯತೀಂದ್ರ ಸಿದ್ದರಾಮಯ್ಯ, ನಮ್ಮ ತಂದೆಯ ವಿರೋಧಿಗಳು ಈಗಾಗಲೇ ಒಟ್ಟುಗೂಡಿದ್ದಾರೆ, ಅವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಅವರ ವಿರುದ್ಧವಾಗಿ ವಿರೋಧಿ ಬಣಗಳು ಒಂದಾಗುತ್ತಾರೆ. ಅವರನ್ನು ಸೋಲಿಸಲು ಪ್ರತಿತಂತ್ರ ನಡೆಸುತ್ತಾರೆ. ಸಿದ್ದರಾಮಯ್ಯನವರು ವರುಣಾ, ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಂತರು ಅವರನ್ನು ಸೋಲಿಸಲು ಅದೇ ಕುತಂತ್ರ ಮಾಡುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಹೈಕಮಾಂಡ್ ಸೂಚಿಸದ ಕಡೆ ಸ್ಪರ್ಧಿಸುವೆ: ಹೈಕಮಾಂಡ್ ನಾಯಕರು ವರುಣಾದಲ್ಲಿ ಹೇಳಿದ್ರೆ ಅಲ್ಲಿ, ಕೋಲಾರದಲ್ಲಿ ಹೇಳಿದ್ರೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರಿನ ಶಿವಾನಂದವೃತ್ತ ಸಮೀಪದ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವಿಧಾನಸಭಾ ಚುನಾವಣೆ ಸ್ಪರ್ಧೆ ಬಗ್ಗೆ ನಾನು ಟೆನ್ಷನ್ ಆಗಿಲ್ಲ. ನನ್ನ ಸ್ಪರ್ಧೆ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಬೇಕು. ಇದಕ್ಕೆ ಸಂಬಂಧಿಸಿದಂತೆ ಈ ತಿಂಗಳು 22ಕ್ಕೆ ಪಟ್ಟಿ ಬಿಡುಗಡೆ ಆಗಲಿದೆ ಅಂದು ಯುಗಾದಿ ಹಬ್ಬ ಒಳ್ಳೆ ದಿನ ಬಿಡುಗಡೆಯಾಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ: ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇ ಅಸಲಿಮುಖ ಕಳಚಿಬಿದ್ದಿದೆ- ಅನಿತಾ ಕುಮಾರಸ್ವಾಮಿ