ಮೈಸೂರು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಶಾಸಕರುಗಳ ಮಧ್ಯೆ ನಡೆದ ವಾಕ್ಸಮರ, ವಿವಾದಕ್ಕೆ ಕಂದಾಯ ಸಚಿವ ಆರ್. ಅಶೋಕ್ ತೆರೆ ಎಳೆದಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದಲ್ಲಿ ಎರಡು-ಮೂರು ದಿನಗಳಿಂದ ನೋಡುತ್ತಿದ್ದೀನಿ, ಮೈಸೂರು ಜಿಲ್ಲಾಧಿಕಾರಿಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳು, ಎಂಎಲ್‌ಸಿ, ಶಾಸಕರು ಪದೇಪದೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ.
ಪತ್ರದ ಮೂಲಕ ರಿಪ್ಲೈ ಮಾಡುತ್ತಿರುವುದು ನೋಡಿದ್ದೀನಿ. ನಿನ್ನೆ ಉಸ್ತುವಾರಿ ಸಚಿವ ಸೋಮಶೇಖರ್ ಅವರು ನನಗೆ ಮಾಹಿತಿ ನೀಡಿದರು. ಜಿಲ್ಲಾಧಿಕಾರಿಗಳು ನನ್ನನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಹೇಗೆ ಜನಪ್ರತಿನಿಧಿಗಳ ಜೊತೆ ನಡೆದುಕೊಳ್ಳಬೇಕು ಮತ್ತು ಜನಪ್ರತಿನಿಧಿಗಳು ಕೂಡ ಜಿಲ್ಲಾಧಿಕಾರಿಗೆ ಹೇಗೆ ಗೌರವ ಕೊಡಬೇಕು ಎಂದು ತಿಳಿಸಿದ್ದೇನೆ ಎಂದರು.
ಜಿಲ್ಲಾಧಿಕಾರಿಯಾಗಿ ಅಭಿವೃದ್ಧಿಗಾಗಿ ಚುನಾಯಿತ ಪ್ರತಿನಿಧಿಗಳ ಜೊತೆ ಸೇರಿ ಸಹಕಾರದಿಂದ ಕೆಲಸ ಮಾಡಬೇಕು. ಜನಸ್ಪಂದನ ಕಾರ್ಯಕ್ರಮಕ್ಕೆ ಶಾಸಕರನ್ನು ಕರೆಯದೆ, ಶಾಸಕರು ಬಂದಾಗ ಗೌರವ ಕೊಡದೆ ಇರುವುದು ಇದೆಲ್ಲಾ ನಾನು ನೋಡಿದ್ದೇನೆ. ಜಿಲ್ಲಾಧಿಕಾರಿಗಳ ಹತ್ತಿರ ಮಾತನಾಡಿ ಜನಸ್ಪಂದನ ಕಾರ್ಯಕ್ರಮ ರದ್ದು ಮಾಡುವುದಕ್ಕೆ ಹೇಳಿದ್ದೇನೆ.
ಮುಂದಿನ ತಿಂಗಳು ಇಡೀ ರಾಜ್ಯದಲ್ಲಿ 'ಹಳ್ಳಿಗೆ ನಡೆಯಿರಿ ಜಿಲ್ಲಾಧಿಕಾರಿಗಳೇ' ಎಂಬ ನಮ್ಮ ಕಾರ್ಯಕ್ರಮ ಪುನಾರಂಭವಾಗಲಿದೆ. ಇದು ಕೋವಿಡ್‌ನಿಂದಾಗಿ ನಿಂತಿತ್ತು. ಮುಂದಿನ ತಿಂಗಳು ಶುರುವಾಗುತ್ತದೆ. ಅಧಿಕಾರಿಗಳು ಏನು ಕೆಲಸ ಮಾಡಬೇಕು ಎಂಬ ಗೈಡ್‌ಲೈನ್ಸ್ ಕೊಡುತ್ತೇವೆ. ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೆ ಪ್ರತಿ ತಿಂಗಳು ಒಂದು ದಿನ ಇರಬೇಕು ಎಂದರು.
ಶಾಸಕ ಮಂಜುನಾಥ್ ಅವರ ಜೊತೆ ಜಿಲ್ಲಾಧಿಕಾರಿಗಳೇ ಮಾತನಾಡಿದ್ದಾರೆ, ಸಮಸ್ಯೆ ಬಗೆಹರಿದಿದೆ. ಸಾ.ರಾ.ಮಹೇಶ್ ಜೊತೆ ನಾನು ಮಾತನಾಡುತ್ತೇನೆ. ಫೋನ್‌ನಲ್ಲಿ ಇದಕ್ಕೆ ಇವತ್ತು ಅಂತ್ಯ ಹಾಡುತ್ತೇವೆ. ಈ ಸಮಸ್ಯೆ ಇನ್ನು ಮುಂದುವರೆಯಲ್ಲ ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಹುಣಸೂರು ಕಾಂಗ್ರೆಸ್ ಶಾಸಕ ಹೆಚ್ ಪಿ ಮಂಜುನಾಥ್ ಹಾಗೂ ಕೆಆರ್‌ನಗರ ಜೆಡಿಎಸ್ ಶಾಸಕ ಸಾ ರಾ ಮಹೇಶ್, ಕಾಂಗ್ರೆಸ್ ಎಂಎಲ್‌ಸಿ ರಘು ಆಚಾರ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸೋದಾಗಿ ಸಾ ರಾ ಮಹೇಶ್ ಗುಡುಗಿದ್ದರು. ಡಿಸಿ ಸ್ಪಷ್ಟೀಕರಣ ಪತ್ರ ಬಹಿರಂಗವಾಗಿ ವಿವಾದವಾಗಿತ್ತು. ಈಗ ಸಚಿವ ಆರ್. ಅಶೋಕ್ ಇದಕ್ಕೆಲ್ಲ ತೆರೆ ಎಳೆಯೋ ಪ್ರಯತ್ನ ಮಾಡಿದ್ದಾರೆ.