ಮೈಸೂರು: ಕೊರೊನಾ 3ನೇ ಅಲೆಯಿಂದ ದೇಶದ ಮಕ್ಕಳನ್ನ ರಕ್ಷಿಸಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಅವರು ಪ್ರಧಾನಿ ಮೋದಿಗೆ ಕೈ ಮುಗಿದು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆ ಬಗ್ಗೆ ಪ್ರಧಾನಿ ಮೋದಿ ಅವರು ಈವರೆಗೂ ಒಂದು ಸಭೆಯನ್ನು ಸಹ ಮಾಡಿಲ್ಲ. ಆರೋಗ್ಯ ಇಲಾಖೆ ಯಾವುದೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ದೇಶದಲ್ಲಿ ಕೊರೊನಾ ಮೂರನೇ ಅಲೆ ಪ್ರಾರಂಭವಾಗುತ್ತಿದೆ. ಮಕ್ಕಳ ಪೌಷ್ಟಿಕಾಂಶ ಹೆಚ್ಚು ಮಾಡಲು ಯಾವುದಾದರೂ ಔಷಧಿ ಕೊಡುತ್ತಿದ್ದೀರಾ? ನಮ್ಮ ದೇಶದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಯಾವ ಕ್ರಮ ತೆಗೆದುಕೊಂಡಿದ್ದೀರಿ? ನಮ್ಮ ತೆರಿಗೆ ಹಣದಲ್ಲಿ ಲಸಿಕೆ ಖರೀದಿಸಿ ಎಂದು ಒತ್ತಾಯಿಸಿದರು.
ಮಕ್ಕಳನ್ನ ಕಾಪಾಡಿಕೊಳ್ಳಲು ತಜ್ಞರೇ ಸಲಹೆ ಕೊಡುತ್ತಿದ್ದಾರೆ. ಭವಿಷ್ಯದ ಜನರೇಷನ್ ಕಾಪಾಡಿಕೊಳ್ಳಬೇಕಿದೆ. ಅಂಬಾನಿ ದೇಶದಲ್ಲೇ ಅತಿ ದೊಡ್ಡ ಶ್ರೀಮಂತ, ಅವರಿಂದ ಹಣ ಪಡೆದು ಲಸಿಕೆ ಖರೀದಿಸಿ. ಮುಂದಿನ ಒಂದು ತಿಂಗಳ ಒಳಗೆ ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲು ಪ್ರಧಾನಿ ಸೂಚನೆ ನೀಡಬೇಕು. ಈ ವಿಚಾರದಲ್ಲಿ ತಡ ಮಾಡುವುದು ಬೇಡ ಎಂದು ಮನವಿ ಮಾಡಿದರು.
ಬಿಜೆಪಿಯ 25 ಸಂಸದರು ನಮ್ಮ ತೆರಿಗೆ ಹಣದಲ್ಲೇ ಲಸಿಕೆ ಖರೀದಿಸಿ ಜನರ ಪ್ರಾಣ ಉಳಿಸಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಆಹಾರ ಸಿಗುತ್ತಿಲ್ಲ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಪೌಷ್ಟಿಕಾಂಶ ಕಾಪಾಡಿಕೊಳ್ಳಲು ಮುಂದಾಗಬೇಕು. ಮಲ್ಟಿ ವಿಟಮಿನ್ ಟ್ಯಾಬ್ಲೆಟ್ಸ್, ಸಿರಪ್ಸ್ ನೀಡಿದರೆ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸಬಹುದು. ನಮ್ಮ ಮಕ್ಕಳ ಭವಿಷ್ಯ ಪ್ರಧಾನಿ ಮೋದಿ ಅವರ ಕೈಯಲ್ಲಿದೆ. ನಮ್ಮ ಮಕ್ಕಳನ್ನ ಕಾಪಾಡಿ ಎಂದು ಕೈ ಮುಗಿದು ಬೇಡಿಕೊಂಡರು.