ಮೈಸೂರು: ನಟ ಪುನೀತ್ ರಾಜ್ ಕುಮಾರ್ ಅವರು ಶಕ್ತಿಧಾಮದಲ್ಲಿ ನಿರ್ಗತಿಕ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆಯಬೇಕೆಂಬ ಕನಸನ್ನು ಹೊಂದಿದ್ದರಂತೆ. ಇದೀಗ ಅವರ ಕನಸು ನನಸಾಗಿಯೇ ಉಳಿದಿದೆ.
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದ ಹೆಣ್ಣಮಕ್ಕಳು ಹೊರಗಡೆ ಹೋಗಿ ಓದುವ ಬದಲು ಅಲ್ಲಿ ಒಂದು ಶಾಲೆಯನ್ನು ನಿರ್ಮಿಸಲು ಪುನೀತ್ ನಿರ್ಧರಿಸಿದ್ದರು. ಅದಕ್ಕಾಗಿ ಆಶ್ರಮದ ಆವರಣದಲ್ಲಿ ಜಾಗವನ್ನು ಸಹ ಗುರುತು ಮಾಡಲಾಗಿತ್ತು. ಈ ಬಗ್ಗೆ ಅ.29(ನಿಧನದ ದಿನ) ಡಿಡಿಪಿಐ ಕೂಡ ಬಂದು ಪರಿಶೀಲನೆ ನಡೆಸಿದ್ದರು.
ಈ ವೇಳೆ 'ಈಟಿವಿ ಭಾರತ'ದೊಂದಿಗೆ ಶಕ್ತಿಧಾಮದ ಟ್ರಸ್ಟಿ ಜಯದೇವ್ ಮಾತನಾಡಿ, ಶಕ್ತಿಧಾಮದಲ್ಲಿ ಶಾಲೆ ಕಟ್ಟಬೇಕು ಎನ್ನುವ ಅಪ್ಪು ಕನಸನ್ನು ನನಸು ಮಾಡುವುದಾಗಿ ಹೇಳಿದರು.
ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು:
ಶಕ್ತಿಧಾಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಾ ಪುನೀತ್ ಅಭಿನಯದ ಗೊಂಬೆ ಹೇಳುತೈತೆ..ಗೊಂಬೆ ಹೇಳುತೈತೆ... ನೀನೇ ರಾಜಕುಮಾರ್..ಎಂಬ ಹಾಡನ್ನು ಹಾಡಿದರು.
ಮೈಸೂರಿಗೆ ಶೂಟಿಂಗ್ ಬರುತ್ತಿದ್ದ ಪುನೀತ್ ಅವರು, ಬಿಡುವು ಮಾಡಿಕೊಂಡು ಶಕ್ತಿಧಾಮಕ್ಕೆ ಭೇಟಿ ನೀಡಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಕುಶಲೋಪರಿ ವಿಚಾರಿಸುತ್ತಿದ್ದರು. ಅವರೊಂದಿಗೆ ಹಾಡಿ ನಲಿಯುತ್ತಿದ್ದರು. ಅಷ್ಟೇ ಅಲ್ಲದೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಂತಹ ಸಮಯದಲ್ಲಿ ಆಶ್ರಮಕ್ಕೆ ಭೇಟಿ ನೀಡಿ ಪ್ರಸಾದ ಹಂಚಿ ಮನೆಗೆ ತೆರಳುತ್ತಿದ್ದರಂತೆ.
ಹೆಣ್ಣು ಮಕ್ಕಳ ಪರಿಸ್ಥಿತಿ ನೋಡಿ ಶಕ್ತಿಧಾನ ಆರಂಭಿಸಿದ್ದ ರಾಜ್:
ಡಾ.ರಾಜ್ ಕುಮಾರ್ ಹಾಗೂ ಕೆಂಪಯ್ಯ(ನಿವೃತ್ತ ಪೊಲೀಸ್ ಅಧಿಕಾರಿ) ಅವರು, ಒಂದೇ ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ವೇಶ್ಯಾವಾಟಿಕೆಗಾಗಿ ಬೀದಿ ಬದಿಯಲ್ಲಿ ನಿಲ್ಲುತ್ತಿದ್ದ ಹೆಣ್ಣು ಮಕ್ಕಳ ಸ್ಥಿತಿ ನೋಡಿ ರಾಜ್ ಕುಮಾರ್ ಮರುಗಿದ್ದರು. ಹೆಣ್ಣು ಮಕ್ಕಳು ಇಂತಹ ಕೆಲಸ ಮಾಡಬಾರದು. ಅವರಿಗೆ ಸಮಾಜದಲ್ಲಿ ಬದುಕಲು ಅವಕಾಶ ಕೊಡಬೇಕು ಎಂಬ ಉದ್ದೇಶದಿಂದ ಸುತ್ತೂರು ಶ್ರೀ ಸೇರಿದಂತೆ ಇತರರೊಡನೆ ಚರ್ಚಿಸಿ ಶಕ್ತಿಧಾಮ ತೆರೆದಿದ್ದರು.
ಇದನ್ನೂ ಓದಿ: ಅಪ್ಪು ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಆಗಮಿಸಿದ ಮೋಹಕ ತಾರೆ ರಮ್ಯಾ..