ಮೈಸೂರು: ಕೋವಿಡ್ ಹೆಚ್ಚಾಗಿ ಲಾಕ್ಡೌನ್ ಜಾರಿಯಾಗಲು ರಾಜಕಾರಣಿಗಳೇ ಕಾರಣ. ಚುನಾವಣೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ಸೋಂಕು ಹರಡಲು ಕಾರಣರಾಗಿದ್ದಾರೆ ಎಂದು ನಗರದ ಸಾರ್ವಜನಿಕರು ಆರೋಪಿಸಿದ್ದಾರೆ.
ಕೋವಿಡ್ ಮುನ್ನೆಚ್ಚರಿಕೆಯಾಗಿ ಲಾಕ್ಡೌನ್ ಘೋಷಿಸಲಿಲ್ಲ. ಈಗ ಸೋಂಕು ಮಿತಿ ಮೀರಿ ಏನೂ ಮಾಡಲಾಗದ ಪರಿಸ್ಥಿತಿಯಾಗಿದೆ. ಪರಿಸ್ಥಿತಿ ಕೈ ಮೀರಿದ ಮೇಲೆ ಒಂದು ದಿನ ಕರ್ಫ್ಯೂ, ಒಂದು ದಿನ ಲಾಕ್ ಅನ್ನುತ್ತಿದ್ದಾರೆ. ಇದರಿಂದ ಜನರು ಗೊಂದಲಕ್ಕೀಡಾಗಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಜನ ವಾಹನದಲ್ಲಿ ಹೋಗಬಾರದಂತೆ. ಹೀಗಾದರೆ, ಖರೀದಿಗೆ ಯಾರು ಬರುತ್ತಾರೆ. ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ಯಾವುದೇ ಪರಿಹಾರವನ್ನೂ ನೀಡಿಲ್ಲ. ಸರ್ಕಾರ, ಜನಪ್ರತಿನಿಧಿಗಳ ಬೇಜಾವಾಬ್ದಾರಿಯಿಂದಾಗಿಯೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಗರದ ನಿವಾಸಿ ಮಹಮ್ಮದ್ ಶಫಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಓದಿ : ತಪ್ಪಾಯ್ತು ಬಿಟ್ಟು ಬಿಡಿ ಸರ್.. ಸೀಜ್ ಆದ ವಾಹನ ಮಾಲೀಕರಿಂದ ಪೊಲೀಸರಿಗೆ ದುಂಬಾಲು
ಸರ್ಕಾರ ಮತ್ತೆ ಅವೈಜ್ಞಾನಿಕ ಲಾಕ್ಡೌನ್ ಘೋಷಣೆ ಮಾಡಿದೆ. ಇದರಿಂದ ವ್ಯಾಪಾರಸ್ಥರು ಆರ್ಥಿಕ ಸಮಸ್ಯೆಗೆ ಸಿಲುಕುವಂತಾಗಿದೆ. ಇಂದಿನ ಈ ಸ್ಥಿತಿಗೆ ಸಿಎಂ ಯಡಿಯೂರಪ್ಪ, ಸಚಿವ ಸುಧಾಕರ್ ಕಾರಣ. ಬೇರೆ ರಾಜ್ಯಗಳು ಲಾಕ್ಡೌನ್ ಘೋಷಿಸಿ ಜನರಿಗೆ ಪರಿಹಾರ ಕೊಟ್ಟಿದೆ. ನಮ್ಮ ರಾಜ್ಯದವರು ಏನು ಕೊಟ್ಟಿದ್ದಾರೆ. ಆರೋಗ್ಯ ಸಚಿವರನ್ನು ಕೇಳಿದ್ರೆ ನಗ್ತಾರೆ ಎಂದು ಇನ್ನೋರ್ವ ವ್ಯಾಪಾರಸ್ಥ ಕಿಡಿಕಾರಿದ್ದಾರೆ.