ಮೈಸೂರು : ಸ್ಮಾರಕ ನಿರ್ಮಾಣ ಮಾಡವ ಸಲುವಾಗಿ ದೇಶದ ಮೊದಲ ಸರ್ಕಾರಿ ಬಾಲಕಿಯರ ಶಾಲೆಯನ್ನು ಕೆಡವಲು ಚಿಂತನೆ ನಡೆದಿದೆ. ಕೂಡಲೇ ಸರ್ಕಾರ ಮಧ್ಯ ಪ್ರವೇಶ ಮಾಡಿ ಶಾಲೆಯನ್ನು ಉಳಿಸಬೇಕೆಂದು ಆಗ್ರಹಿಸಿ ಪ್ರಗತಿಪರರು ನಗರದ 8 ಕಡೆ ಪ್ರತಿಭಟಿಸಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಮೈಸೂರು ಮಹಾರಾಣಿ ನಿರ್ಮಾಣ ಮಾಡಿರುವ ದೇಶದ ಮೊದಲ ಸರ್ಕಾರಿ ಮಾದರಿ ಹಿರಿಯ ಬಾಲಕಿಯರ ಕನ್ನಡ ಶಾಲೆಯಿದೆ. ಈ ಶಾಲೆಯನ್ನು ವಿವೇಕಾನಂದ ಸ್ಮಾರಕ ನಿರ್ಮಿಸಲು ಕೆಡವಿ ಹಾಕಲು ಪ್ರಯತ್ನಗಳು ನಡೆಯುತ್ತಿವೆ.
ಹೈಕೋರ್ಟ್ನಿಂದಲೂ ಸಹ ಇದಕ್ಕೆ ಆದೇಶ ದೊರತಿದೆ ಎಂಬ ಸುದ್ದಿಯ ಹಿನ್ನೆಲೆ ಪ್ರಗತಿಪರರು ಶಾಳೆ ಉಳಿಸಿ ಪಕ್ಕದಲ್ಲಿ ಸ್ಮಾರಕ ನಿರ್ಮಿಸಿ ಎಂಬ ಘೋಷಣೆಯೊಂದಿಗೆ ಪ್ರತಿಭಟಿಸಿದರು.
ಶಾಲೆಯ ಮುಂಭಾಗ, ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ, ಸದ್ವಿದ್ಯ ಪಾಠಶಾಲೆ ವೃತ್ತ, ಮಾನಸ ಗಂಗೋತ್ರಿಯ ಕುವೆಂಪು ಪ್ರತಿಮೆ ಮುಂಭಾಗ, ಮೈಸೂರು ವಿವಿಯ ಕ್ರಾಫಡಾಲ್ ಮುಂಭಾಗ, ವಿದ್ಯಾಪೀಠ ಸರ್ಕಲ್, ಟೌನ್ ಹಾಲ್ ಬಳಿ ಹಾಗೂ ವಿವೇಕಾನಂದ ವೃತ್ತದಲ್ಲಿ ಪ್ರಗತಿಪರರು ಪ್ರತಿಭಟನೆ ನಡೆಸಿ, ಸ್ಮಾಕರ ನಿರ್ಮಾಣಕ್ಕೆ ಶಾಲೆ ಕೆಡವುದು ಬೇಡ, ಶಾಲೆಯೂ ಇರಲಿ, ಸ್ಮಾರಕವೂ ನಿರ್ಮಾಣವಾಗಿಲಿ ಎಂದು ಪ್ರಗತಿಪರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ದೇಶದ ಮೊದಲ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯನ್ನು ಮಹಾರಾಣಿಯವರು ನಿರ್ಮಾಣ ಮಾಡಿದ್ದರು. ಈ ಜಾಗದಲ್ಲಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡಲು ಶಾಲೆಯನ್ನು ಕೆಡುವುದು ಸರಿಯಲ್ಲ. ಹೈಕೋರ್ಟ್ ತನ್ನ ಆದೇಶವನ್ನು ಮರು ಪರಿಶೀಲನೆ ಮಾಡಬೇಕು. ಸರ್ಕಾರ ಮಧ್ಯಪ್ರವೇಶ ಮಾಡಿ ಕನ್ನಡ ಶಾಲೆಯನ್ನು ಉಳಿಸಬೇಕೆಂದು ಆಗ್ರಹಿಸಿದರು.