ಮೈಸೂರು: ಸಂಸತ್‌ನೊಳಗೆ ಪ್ರವೇಶಿಸಲು ಪಾಸ್ ನೀಡಿದ ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೆ ಒಳಪಡಿಸಿ, ಸಂಸದ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಮೈಸೂರಿನ ಮಹಾರಾಜ ಮೈದಾನದಲ್ಲಿ ಇಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಪ್ರತಿಭಟನೆ ನಡೆಸಿ, ಸಹಿ ಸಂಗ್ರಹ ಚಳುವಳಿ ನಡೆಸಿತು.
ಮಹಾರಾಜ ಮೈದಾನದಲ್ಲಿ ಸೇರಿದ್ದ ವೇದಿಕೆಯ ಕಾರ್ಯಕರ್ತರು ಪ್ರತಾಪ್ ಸಿಂಹ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣ ಸಂಬಂಧ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಅಲ್ಲದೇ ಸಂಸದ ಸ್ಥಾನದಿಂದಲೇ ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಮೈಸೂರಿನ ಮನೋರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೂ ಏನು ಸಂಬಂಧ? ಯಾವ್ಯಾವ ಕೆಲಸ ಮಾಡುತ್ತಿದ್ದರು ಎಂಬ ಬಗ್ಗೆಯೂ ತನಿಖೆ ಮಾಡಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಶಿವರಾಮ್ ಆಗ್ರಹಿಸಿದರು.
ಫ್ಲೆಕ್ಸ್ ತೆರವು: ಪಾಲಿಕೆ ವತಿಯಿಂದ ಅನುಮತಿ ಪಡೆಯದೇ ಜಾಗೃತಿ ವೇದಿಕೆಯ ಕೆಲವರು ಮಹಾರಾಜ ಮೈದಾನದ ಸರ್ಕಲ್ನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಫ್ಲೆಕ್ಸ್ ಹಾಕಿದ್ದರು. ಈ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಹಾನಗರ ಪಾಲಿಕೆಯ ಸಿಬ್ಬಂದಿ ಮತ್ತು ಪೊಲೀಸರು ಹಾಕಲಾಗಿದ್ದ ಫ್ಲೆಕ್ಸ್ ತೆರವುಗೊಳಿಸಿದರು.
ಶಿವರಾಮು ವಿರುದ್ಧ ದೂರು: ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ವಿರುದ್ಧ ಬಿಜೆಪಿಯ ಎನ್.ಆರ್.ಕ್ಷೇತ್ರದ ಮಾಜಿ ಅಧ್ಯಕ್ಷ ಆನಂದ್ ಅವರು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್, ಪಾಲಿಕೆ ವತಿಯಿಂದ ಅನುಮತಿ ಪಡೆಯದೇ ಸಹಿ ಸಂಗ್ರಹಣೆ ಮಾಡುವ ನೆಪದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಫ್ಲೆಕ್ಸ್ ಹಾಕಿ ತೇಜೋವಧೆ ಮಾಡುವ ಯತ್ನ ನಡೆದಿದೆ. ಇದು ಹೊಸತೇನಲ್ಲ. ಆದರೆ, ಈ ಬಾರಿ ಅತ್ಯಂತ ಹೇಯಕರವಾಗಿ ಬಿಂಬಿಸಲಾಗಿದೆ. ಇದು ಖಂಡನೀಯ. ಕಾನೂನು ಉಲ್ಲಂಘಿಸಿ ಜನಪ್ರತಿನಿಧಿಯನ್ನು ತೇಜೋವಧೆ ಮಾಡಿರುವುದು ಖಂಡನೀಯ. ಈ ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೈಸೂರಿನವರು ಎಂಬ ವಿಶ್ವಾಸದ ಮೇಲೆ ಸಂಸದರು ಮನೋರಂಜನ್ಗೆ ಪಾಸ್ ನೀಡಿದ್ದಾರೆ ಹೊರತು, ಇಂತಹ ಯಾವುದೇ ಕುಕೃತ್ಯಗಳಿಗೆ ಅವರು ಎಂದಿಗೂ ಬೆಂಬಲಿಸಿಲ್ಲ ಎಂದರು.
ಒಬಿಸಿ ನಗರ ಪ್ರಧಾನ ಕಾರ್ಯದರ್ಶಿ ಬಿಜೆಪಿ ಹಿಂದುಳಿದ ವರ್ಗದ ನಗರ ಪ್ರಧಾನ ಕಾರ್ಯದರ್ಶಿ ಮುನಿರತ್ನ, ಎನ್.ಆರ್. ಕ್ಷೇತ್ರದ ಉಪಾಧ್ಯಕ್ಷರಾದ ಪದ್ಮನಾಭ, ಜಯಸಿಂಹ ಶ್ರೀಧರ್, ವಕೀಲರಾದ ಗೋಕುಲ್ ಗೋವರ್ಧನ್, ಹೇಮಂತ್ ಕುಮಾರ್, ಉಮೇಶ್, ಮನೋಜ್, ಸಂದೀಪ, ಧರ್ಮೇಂದ್ರ ಮತ್ತಿತರರು ಇದ್ದರು.
ಇದನ್ನೂ ಓದಿ: ಸಂಸತ್ ಭದ್ರತಾ ಲೋಪ ಪ್ರಕರಣ: ಮನೋರಂಜನ್ ವಾಸಿಸುತ್ತಿದ್ದ ಮೈಸೂರಿನ ಮನೆ ಕೊಠಡಿಗೆ ಬೀಗ