ಮೈಸೂರು: ಅರಮನೆಯ ದರ್ಬಾರ್ ಹಾಲ್ನಲ್ಲಿ ಬೆಳಗ್ಗೆ 10.45 ರಿಂದ 11.05 ರವರೆಗಿನ ಶುಭ ವೃಶ್ಚಿಕ ಲಗ್ನದಲ್ಲಿ ರತ್ನಖಚಿತ ಸಿಂಹಸನವನ್ನು ಧಾರ್ಮಿಕ ಕೈಂಕರ್ಯಗಳ ನಂತರ ಜೋಡಣೆ ಮಾಡಲಾಯಿತು. ವಿಶ್ವ ವಿಖ್ಯಾತ ದಸರಾ ಮಹೋತ್ಸವದ ರಾಜಮನೆತನದ ಶರನ್ನವರಾತ್ರಿಯ ಪ್ರಮುಖ ಆಚರಣೆಯಾದ ಖಾಸಗಿ ದರ್ಬಾರ್ಗೆ, ರತ್ನಖಚಿತ ಸಿಂಹಾಸನ ಜೋಡಣೆ ಇಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ನಡೆಯಿತು.
ಬೆಳಗ್ಗೆ ಅರಮನೆಯ ದರ್ಬಾರ್ ಹಾಲ್ನಲ್ಲಿ ಅರಮನೆ ಪುರೋಹಿತರ ಸಮ್ಮುಖದಲ್ಲಿ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಮಾಡಲಾಯಿತು. ರಾಜವಂಶಸ್ಥ ಯದುವೀರ್ ಇದರಲ್ಲಿ ಭಾಗವಹಿಸಿದ್ದರು. ಅರಮನೆಯ ನೆಲ ಮಾಳಿಗೆಯ ಸ್ಟ್ರಾಂಗ್ ರೂಮ್ನಲ್ಲಿ ಬಿಡಿ-ಬಿಡಿಯಾಗಿದ್ದ ಸಿಂಹಾಸನವನ್ನು ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ದರ್ಬಾರ್ ಹಾಲ್ಗೆ ತರಲಾಯಿತು. ಅಲ್ಲಿ ಪುರಾತನ ಕಾಲದಿಂದ ಸಿಂಹಾಸನ ಜೋಡಣೆ ಮಾಡುವ ಗೆಜ್ಜಗಹಳ್ಳಿ ಗ್ರಾಮಸ್ಥರು ರತ್ನಖಚಿತ ಸಿಂಹಾಸನವನ್ನು ಜೋಡಣೆ ಮಾಡಿದರು.
ಮಂಗಳವಾರ ಜೋಡಣೆಯಾದ ರತ್ನಖಚಿತ ಸಿಂಹಾಸನವನ್ನು ಪೂಜೆಯ ಬಳಿಕ ಸಂಪೂರ್ಣ ಮುಚ್ಚಲಾಗಿದೆ. ಸೆ.26 ರಂದು ದಸರಾ ಶರನ್ನವರಾತ್ರಿ ಆರಂಭದ ದಿನ ರಾಜವಂಶಸ್ಥ ಯದುವೀರ್ ಶರನ್ನವರಾತ್ರಿ ಪೂಜೆಗಳನ್ನು ಕೈಗೊಂಡು ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಿದ್ದಾರೆ. ಬಳಿಕ ಖಾಸಗಿ ದರ್ಬಾರ್ ನಡೆಸಲಿದ್ದು, 9 ದಿನಗಳ ಕಾಲ ಸಿಂಹಾಸನಕ್ಕೆ ಬೆಳಗ್ಗೆ ಪೂಜೆ ಸಲ್ಲಿಸಲಿದ್ದಾರೆ.
ಸೆ.20 ರಂದು ಜೋಡಣೆಯಾದ ರತ್ನಖಚಿತ ಸಿಂಹಾಸನವನ್ನು ಅಕ್ಟೋಬರ್ 20 ರಂದು ವಿಸರ್ಜನೆ ಮಾಡಲಾಗುವುದು. ಇಂದು ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ 1 ಗಂಟೆಯ ವರೆಗೆ ಅರಮನೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಯಿತು.
ಇದನ್ನೂ ಓದಿ: ಮೈಸೂರು ದಸರಾ 2022: ಪ್ರವಾಸಿಗರಿಗಾಗಿ ಕಾಂಬೋ ಟಿಕೆಟ್ ವ್ಯವಸ್ಥೆ ಜಾರಿ