ಮೈಸೂರು : ಹಿಂದಿ ಸಂಪರ್ಕ ಭಾಷೆಯಾಗಿ ಬಳಸಿ ಅಂದಿದ್ದಾರೆ. ರಾಷ್ಟ್ರೀಯ ಭಾಷೆಯನ್ನಾಗಿ ಬಳಸಿ ಅಂತಾ ಹೇಳಿಲ್ಲ. ಗೃಹಮಂತ್ರಿ ಅಮಿತ್ ಶಾ ಹೇಳಿಕೆಯನ್ನ ತಿರುಚುವ ಕೆಲಸ ಮಾಡಲಾಗುತ್ತಿದೆ ಎಂದು ಸಂಸದ ಪ್ರತಾಪ್ಸಿಂಹ ಅವರು ಸಮಜಾಯಿಸಿ ನೀಡಿದ್ದಾರೆ.
ಹಿಂದಿ ರಾಷ್ಟ್ರೀಯ ಭಾಷೆ ವಿವಾದ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಭಾಷೆ ಇಟ್ಟುಕೊಂಡು ರಾಜಕಾರಣ ಮಾಡಲಾಗಿದೆ.
ಆದರೆ, ಕರ್ನಾಟಕ ಉದಾರತೆಗೆ ಹೆಸರಾಗಿರುವ ರಾಜ್ಯ. ಕೆಲ ರಾಜಕಾರಣಿಗಳು ಸುಮ್ಮನೆ ಅಮಿತ್ ಶಾ ಹೇಳಿಕೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನನಗೆ ಒಂದನೇ ತರಗತಿಯಲ್ಲಿ ಕನ್ನಡ ಪ್ರಥಮ ಭಾಷೆ. 5ನೇ ತರಗತಿಯಲ್ಲಿ ಇಂಗ್ಲಿಷ್ ದ್ವಿತೀಯ ಭಾಷೆ. 8ನೇ ತರಗತಿಗೆ ಹೋದಾಗ ಹಿಂದಿ ತೃತೀಯ ಭಾಷೆ ಆಗಿತ್ತು. ಈಗ ಶಾಲೆಗಳಲ್ಲಿ 6ನೇ ತರಗತಿಯಿಂದ ಹಿಂದಿ ಕಲಿಸಲಾಗುತ್ತಿದೆ. ನಮ್ಮಲ್ಲಿ ಅಧಿಕೃತ ಭಾಷಾ ಸ್ಥಾನಮಾನ ಹಿಂದಿ ಮತ್ತು ಇಂಗ್ಲಿಷ್ಗೆ ಕೊಡಲಾಗಿದೆ.
ಇವು ಕಮ್ಯುನಿಕೇಷನ್ ಭಾಷೆಗಳು. ಅಮಿತ್ ಶಾ ಸಂಪರ್ಕ ಭಾಷೆಯಾಗಿ ಹಿಂದಿ ಬಳಕೆ ಮಾಡಬೇಕು ಎಂದಿದ್ದಾರೆ. ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಹಿಂದಿ ಸಂಪರ್ಕ ಭಾಷೆ ಆಗಿ ಬಳಕೆ ಆಗುತ್ತಿದೆ ಎಂದರು. ಹಿಂದಿ ರಾಷ್ಟ್ರದ ಭಾಷೆ ಅಂತಾ ಹೇಳಿದವರು ಯಾರು?. ಹಿಂದಿ ರಾಷ್ಟ್ರ ಭಾಷೆ ಮಾಡುತ್ತೇವೆ ಅಂತಾ ಹೋಗಿರುವವರು ಯಾರು?. ಹಾಗಿದ್ದರೂ ತಕರಾರು ಯಾಕೆ?.
ಕರೆನ್ಸಿಯಲ್ಲಿರುವ 15 ಭಾಷೆಗಳೂ ರಾಷ್ಟ್ರೀಯ ಭಾಷೆಗಳಿವೆ. ಉಳಿದಿರುವ ಲಿಪಿ ಇರುವ ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ. ಸಂವಿಧಾನದಲ್ಲಿ ಯಾವುದೋ ಒಂದು ಭಾಷೆಗೆ ರಾಷ್ಟ್ರೀಯ ಭಾಷಾ ಸ್ಥಾನಮಾನ ಕೊಟ್ಟಿಲ್ಲ. ಹಿಂದಿ ಎಂದ ಕೂಡಲೇ ಭೂತನೋ, ಸೈತಾನೋ ಎನ್ನುವಂತೆ ನೋಡಬೇಡಿ ಎಂದರು. ಅಜಯ್ ದೇವಗನ್ ಟ್ವೀಟ್ ಅಕ್ಷಮ್ಯ ಅಪರಾಧ. ಅವರವರ ಭಾಷೆಯ ಮೇಲೆ ಎಲ್ಲರಿಗೂ ಗೌರವವಿದೆ. ಭಾಷೆಗೆ ಅಗೌರವ ಬೇಡ ಎಂದರು.
ಪ್ರಿಯಾಂಕ್ ಖರ್ಗೆ ಹೇಳಿಕೆ ವೀರ : ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಸಿಐಡಿಯಿಂದ ಪ್ರಿಯಾಂಕ್ ಖರ್ಗೆ ನೋಟಿಸ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಪ್ರತಾಪ ಸಿಂಹ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಸಿಐಡಿ ನೋಟಿಸ್ ನೀಡಿರುವುದು ವಿಚಾರಣೆಗೆ ಮತ್ತಷ್ಟು ಅನುಕೂಲವಾಗಲೆಂಬ ಉದ್ದೇಶದಿಂದ, ಇದನ್ನು ಅರಿತವರು ವಿಚಾರಣೆಗೆ ಹೋಗಬೇಕಿತ್ತು. ಆದರೆ, ಪ್ರಿಯಾಂಕ್ ಖರ್ಗೆ ಅವರು ಜನರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಓದಿ: ದೆಹಲಿಗೆ ಹೋಗ್ತಾ ಇದೀನಿ, ಚೀಫ್ ಜಸ್ಟೀಸ್ ಜೊತೆ ಸಂವಾದ ಇದೆ ಎಂದ ಸಿಎಂ.. ಸಚಿವಾಕಾಂಕ್ಷಿಗಳಿಗೆ ನಿರಾಶೆ!?