ಮೈಸೂರು: ಈ ಬಾರಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದ್ದು, ವರುಣಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಗೆಲುವು ಸಾಧಿಸಲಿದ್ದಾರೆ. ವರುಣಾಗೆ ಸೋಮಣ್ಣ ಬಂದಿರುವುದು ಬಲಿಯಾಗಲು ಅಲ್ಲ, ಬಲಿ ತೆಗೆದುಕೊಳ್ಳಲು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇಂದು ಮೈಸೂರು ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಮಾಧ್ಯದವರೊಂದಿಗೆ ಮಾತನಾಡಿದ ಅವರು, ವರುಣಾದಲ್ಲಿ 15 ವರ್ಷಗಳ ಅಪ್ಪ ಮಗನ ದರ್ಬಾರ್‌ಗೆ ಅಂತ್ಯ ಕಾಲ ಬಂದಿದೆ. ಈ ಬಾರಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಲಿದ್ದು, 8 ರಿಂದ 10 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ವರುಣಾ ಕ್ಷೇತ್ರದಿಂದ ಈ ಬಾರಿ ಸೋಮಣ್ಣ ಗೆಲುವು ಸಾಧಿಸಲಿದ್ದಾರೆ. ಇದು ಮೇ 13 ರಂದು ಗೊತ್ತಾಗಲಿದೆ. ಸೋಮಣ್ಣ ವರುಣಾ ಮತ್ತು ಚಾಮರಾಜನಗರ ಜಿಲ್ಲೆಗೆ ಬಂದಿರುವುದರಿಂದ ಹಳೇ ಮೈಸೂರು ಭಾಗದಲ್ಲಿ ನಾಯಕತ್ವ ಕೊರತೆ ನೀಗಿಸಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ನಿಷೇಧಿತ ಪಿಎಫ್‌ಐ ಎಸ್ಡಿಪಿಐ ಬೆಂಬಲ ಕೇಳಿದೆ - ಪ್ರತಾಪ್ ಸಿಂಹ: ಕಾಂಗ್ರೆಸ್ ನಾಯಕರು ಎಸ್ಡಿಪಿಐ ಬೆಂಬಲ ಕೊಡಬೇಕು ಎಂದು ಕರೆ ಕೊಟ್ಟಿದ್ದಾರೆ. ಅಧಿಕಾರಕ್ಕೆ ಬರಲು ನಿಷೇಧಿತ ಸಂಘಟನೆಯ ರಾಜಕೀಯ ವಿಭಾಗದ ಬೆಂಬಲ ಕೇಳುತ್ತಿದ್ದಿರಾ. ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರಾ. ಪಿಎಫ್‌ಐ, ಕೆಎಫ್ಡಿ ಸಂಘಟನೆಗಳು ಎಸ್ಡಿಪಿಐನ ಮಾತೃ ಸಂಸ್ಥೆಗಳು. ಪಿಎಫ್ ಐ ಮತ್ತು ಕೆಎಫ್ ಡಿ ಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಅಧಿಕಾರಕ್ಕೆ ಬರಲು ದೇಶದ್ರೋಹಿಗಳ ಜೊತೆ ಸಮಾಜ ಘಾತುಕರ ಜೊತೆ ಕಾಂಗ್ರೆಸ್ ಕೈ ಜೋಡಿಸುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಪಿಎಫ್‌ಐ, ಕೆಎಫ್ಡಿ ಸಂಘಟನೆಯ ಕಾರ್ಯಕರ್ತರು ಸಿದ್ದರಾಮಯ್ಯಗೆ ದತ್ತು ಮಕ್ಕಳು ಇದ್ದಂತೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರು ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ತರಲು ಹೊರಟ್ಟಿದ್ದಾರೆ. ಸಮಾಜಘಾತುಕ ಸಂಘಟನೆಯ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹತ್ಯೆಗಳು ಹೆಚ್ಚಾಗುತ್ತವೆ. ಸಿದ್ದರಾಮಯ್ಯರ ಸಾಕು ಮಕ್ಕಳಿಂದ ರಾಜ್ಯದಲ್ಲಿ ಸಾಲು ಸಾಲು ಹತ್ಯೆ ನಡೆದಿವೆ ಎಂದು ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಉಳಿದ 12 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಶೀಘ್ರ : ವಿಧಾನಸಭಾ ಕ್ಷೇತ್ರಗಳ ಅತಿಹೆಚ್ಚು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವುದು ಬಿಜೆಪಿ ಆಗಿದೆ. ಮೈಸೂರಿನ ಕೃಷ್ಣ ರಾಜ ಕ್ಷೇತ್ರ ಸೇರಿದಂತೆ ಉಳಿದ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಇಂದು ರಾತ್ರಿ ಅಥವಾ ನಾಳೆ ಬಿಡುಗಡೆ ಮಾಡಲಿದೆ. ಈ ಬಾರಿ ನಾವು ವರುಣಾ ಸೇರಿದಂತೆ ಮೈಸೂರಿನ ಹಲವು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ. ನಾನು ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಎರಡು ದಿನ ಭರ್ಜರಿ ಪ್ರಚಾರ: ವರುಣಾ ಬಳಿಕ ಚಾಮರಾಜನಗರದಲ್ಲಿ ಸೋಮಣ್ಣ ಸ್ಟ್ರಾಟಜಿ ಶುರು!