ಮೈಸೂರು : ಮಹಿಷಾ ದಸರಾ ಆಚರಣೆ ಹಾಗೂ ಚಾಮುಂಡಿ ಬೆಟ್ಟ ಚಲೋ ಎರಡು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ಸಂಸದ ಪ್ರತಾಪ್ ಸಿಂಹ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ಮುಂದುವರೆದ ಮಹಿಷಾ ದಸರಾ ಹಾಗೂ ಚಾಮುಂಡಿ ಚಲೋ ಜಟಾಪಟಿ ಕುರಿತು ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಹಿಷಾ ದಸರಾ ಮತ್ತು ಚಾಮುಂಡಿ ಬೆಟ್ಟ ಚಲೋ ಆಚರಣೆಗೆ ಅನುಮತಿ ಕೊಟ್ಟಿಲ್ಲ. ಜಿಲ್ಲಾಡಳಿತದ ಈ ನಿರ್ಧಾರವನ್ನು ಸ್ವಾಗತ ಮಾಡುತ್ತೇವೆ ಎಂದರು.
ನಮ್ಮ ಉದ್ದೇಶ ಮಹಿಷಾ ದಸರಾ ಎಂಬ ಅಸಹ್ಯ, ಅನಾಚಾರವನ್ನು ತಡೆಯುವುದಷ್ಟೇ. ನಮ್ಮ ಸರ್ಕಾರವಿದ್ದಾಗ ಮಹಿಷಾ ದಸರಾ ಮಾಡಲಿಕ್ಕೆ ಬಿಟ್ಟಿರಲಿಲ್ಲ. ಒಂದು ವೇಳೆ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅನುಮತಿ ಕೊಟ್ಟರೆ ಅಕ್ಟೋಬರ್ 15ರಂದು ನಡೆಯಲಿರುವ ದಸರಾ ಉದ್ಘಾಟನೆ ವೇಳೆ ನಾನು ಇದನ್ನು ಪ್ರಶ್ನೆ ಮಾಡುತ್ತೇನೆ ಎಂದು ಕಿಡಿಕಾರಿದರು.
ಮಹಿಷನನ್ನ ದೇವರು ಮಾಡಲು ಹೊರಟಿದ್ದಾರೆ. ಮಹಿಷಾ ಬೌದ್ದ ಬಿಕ್ಕು ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಮಹಿಷಾನನ್ನು ದೇವರು ಮಾಡಿ ಚಾಮುಂಡಿ ತಾಯಿಯನ್ನು ಅವಮಾನಿಸುವುದು ಇವರ ಕೆಲಸ ಎಂದು ಆಕ್ರೋಶ ಹೊರಹಾಕಿದರು.
ಪ್ರತಾಪ್ ಸಿಂಹನ ವಿರುದ್ಧ ಪ್ರತಿಭಟನೆ : ಮಹಿಷಾ ದಸರಾ ಆಚರಣೆಗೆ ಅನುಮತಿ ನಿರಾಕರಿಸಿದ್ದರಿಂದ ಸಂಸದ ಪ್ರತಾಪ್ ಸಿಂಹ ವಿರುದ್ಧ ನಗರದ ಬಲ್ಲಾಳ್ ವೃತ್ತದಲ್ಲಿ ಬುಧವಾರ ರಾತ್ರಿ ಪ್ರತಿಭಟನೆ ನಡೆಸಲಾಯಿತು. ಅಶೋಕಪುರಂ ನಿವಾಸಿಗಳು ಮತ್ತು ಮಹಿಷಾ ದಸರಾ ಆಚರಣೆ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ, ಪ್ರತಾಪ್ ಸಿಂಹ ಬಂಧನಕ್ಕೆ ಆಗ್ರಹಿಸಲಾಯಿತು. ಜೊತೆಗೆ ಸಂಸದರನ್ನು ಅವಿವೇಕಿ, ಕೋಮುವಾದಿ, ದಲಿತ ವಿರೋಧಿ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ : ಚಾಮುಂಡಿ ಬೆಟ್ಟದಲ್ಲಿ ನಾವು ಯಾವುದೇ ಅನಾಚಾರ ಮಾಡಲು ಬಿಡುವುದಿಲ್ಲ : ಸಂಸದ ಪ್ರತಾಪ್ ಸಿಂಹ
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಹೇಳಿದ್ದೇನು? : ಮಹಿಷಾ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಣೆ ಮಾಡಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, 'ಅಕ್ಟೋಬರ್ 15 ರಂದು ದಸರಾ ಉದ್ಘಾಟನೆ ನಡೆಯಲಿದೆ. ದಸರಾ ಉದ್ಘಾಟನೆಗೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮಹಿಷಾ ದಸರಾ ಆಚರಣೆ ಮತ್ತು ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ. ಮೈಸೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಕಾರ್ಯಕ್ರಮಗಳಿಗೂ ಅನುಮತಿ ನಿರಾಕರಣೆ ಮಾಡಿದ್ದೇವೆ. ಒಂದು ವೇಳೆ ಈ ಕಾರ್ಯಕ್ರಮಗಳನ್ನು ನಡೆಸಲು ಮುಂದಾದಲ್ಲಿ 144 ಜಾರಿ ಮಾಡಲಾಗುತ್ತದೆ. ಸನ್ನಿವೇಶವನ್ನು ಗಮನಿಸಿ 144 ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ದಸರಾ ಉದ್ಘಾಟನೆಗೆ ಅಡಚಣೆ ಆಗಬಾರದು, ಮಹಿಷಾ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಣೆ: ನಗರ ಪೊಲೀಸ್ ಆಯುಕ್ತ