ಮೈಸೂರು: ಪಾಳೇಗಾರಿಕೆ ಮನಸ್ಥಿತಿಗೆ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ. ಇಲ್ಲಿ ಪಾಳೇಗಾರಿಕೆ ನಡೆಯುವುದಿಲ್ಲ ಎಂದು ಸಂಸದೆ ಸುಮಲತಾ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರನ್ನು ಪೇಟೆ ರೌಡಿಗೆ ಹೋಲಿಸಿ ಸಂಸದೆ ಸುಮಲತಾ ಮಾತನಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರತಾಪ್ ಸಿಂಹ, ಸುಮಲತಾ ಅವರು ಸಿನಿಮಾ ಜಗತ್ತಿನಿಂದ ಬಂದವರು, ಬಣ್ಣದ ಲೋಕದಿಂದ ಬಂದವರು. ನೀವು ಏನೋ ಪತ್ರಕರ್ತರು ಕೆಣಕಿದ್ದೀರಿ. ಅದಕ್ಕೆ ಅವರಿಗೆ ನಾಗರಹಾವು ಸಿನಿಮಾದ ಜಲೀಲಾ ನೆನಪಾಗಿ ಫಿಲ್ಮಿ ಡೈಲಾಗ್ ಹೊಡೆದಿದ್ದಾರೆ. ಅದನ್ನು ನೀವು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಒಬ್ಬ ಚಪ್ಪಲಿ ಹೊಲೆಯುವವನ ಮಗ ಅಬ್ರಾಹಂ ಲಿಂಕನ್ ಅಮೆರಿಕದ ಅಧ್ಯಕ್ಷ ಆದ. ಚಾಯ್ ಮಾರಾಟ ಮಾಡುತ್ತಿದ್ದ ನರೇಂದ್ರ ಮೋದಿ ಅವರು ದೇಶದ ಪ್ರಧಾನಮಂತ್ರಿ ಆಗಿದ್ದಾರೆ. ಪ್ರಜಾತಂತ್ರದಲ್ಲಿ ಯಾರು ಏನು ಬೇಕಾದರೂ ಆಗಬಹುದು. ಆದರೆ ಅದು ಇದು ಹೇಳುವ ಪಾಳೇಗಾರಿಕೆ ಮನಸ್ಥಿತಿಗೆ ಪ್ರಜಾಪ್ರಭುತ್ವದಲ್ಲಿ ಜಾಗವಿಲ್ಲ ಎಂದರು.
ಮೈಸೂರಿಗೆ ಒಳ್ಳೆಯದಾಗಬೇಕು ಜೊತೆಗೆ ಮಂಡ್ಯ, ರಾಮನಗರಕ್ಕೂ ಅನುಕೂಲ ಆಗಬೇಕು. ಆದಷ್ಟು ಬೇಗ ಅದನ್ನು ಕಂಪ್ಲೀಟ್ ಮಾಡುವ ಉದ್ದೇಶ ಬಿಟ್ಟರೆ ಏನು ಇಲ್ಲ. ನಾನು ಸ್ವತಃ ಹೇಳಿಕೆ ಕೊಟ್ಟುಕೊಂಡು ಕಾಲಹರಣ ಮಾಡುವುದಕ್ಕೆ ಬಂದಿಲ್ಲ. ಕೆಲವರು ಮಾತನಾಡುವಾಗ ಕೊಡಗಿನ ರಸ್ತೆ ಬಗ್ಗೆಯೂ ಹೇಳಿದ್ದಾರೆ. ಒಬ್ಬ ಜನಪ್ರತಿನಿಧಿಯಾಗಿರುವವರಿಗೆ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಎಂ.ಡಿ.ಆರ್. ಸ್ಟೇಟ್ ಹೈವೇ, ನ್ಯಾಷನಲ್ ಹೈವೆಗಳು ಯಾರ ವ್ಯಾಪ್ತಿಗೆ ಬರುತ್ತವೆ, ಎಂ.ಎಲ್.ಎಗೆ ಬರುತ್ತದೋ, ಎಂಪಿ ವ್ಯಾಪ್ತಿಗೆ ಬರುತ್ತದೋ ಎಂಬ ಕನಿಷ್ಠ ಜ್ಞಾನ ಇದ್ದರೆ ಅಬದ್ಧವಾದ ಹೇಳಿಕೆ ಕೊಡುವುದು ನಿಲ್ಲುತ್ತದೆ ಎಂದರು.
ಇನ್ನು ಮಂಡ್ಯ ನನಗೆ ಸೇರಿಲ್ಲದೆ ಇದ್ದರೂ ಕೂಡ ಆ ರಸ್ತೆ ಮಂಡ್ಯ ಮುಖಾಂತರ ಮೈಸೂರಿಗೆ ಬರಬೇಕು. ಅಲ್ಲಿನ ಜನರ ಸಮಸ್ಯೆ ಕೂಡ ನಿವಾರಣೆ ಆಗಬೇಕು. ಜನರೇ ಅಡ್ಡ ಹಾಕಿದ್ದರಿಂದ ಯಲಿಯೂರಿನ ಬಳಿ ನಾನು ಇಳಿದು ಸ್ಪಂದಿಸಿದೆ. ಆಚೆಗೆ ಬೇರೆ ಏನು ಉದ್ದೇಶ ಇಲ್ಲ. ನಾನು ಮಾಧ್ಯಮದವರಿಗೆ ಹೇಳುವುದು ಇಷ್ಟೇ. ಯಾರು ಏನು ಬೇಕಾದರೂ ಹೇಳಲಿ. ನಾನು ಬಸವಣ್ಣನ ಕಾಯಕ ನಿಷ್ಠೆಯಲ್ಲಿ ನಂಬಿಕೆ ಇಟ್ಟಿದವನು. ನನ್ನ ಕೆಲಸ ಅಷ್ಟೇ ಮಾತಾಡುತ್ತೆ. ನಾನು ಯಾವ ಸ್ಟಾರ್ ಅಲ್ಲ. ಅಭಿಮಾನಿಗಳು ಬಂದು ವೋಟ್ ಹಾಕುವುದಕ್ಕೆ ನನ್ನ ಕೆಲಸ ನನ್ನ ಕೈ ಹಿಡಿಯುತ್ತೆ. ಆ ಕೆಲಸದಲ್ಲಿ ನನಗೆ ನಂಬಿಕೆ ಇದೆ ಎಂದು ತಿರುಗೇಟು ನೀಡಿದರು.