ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಗುಣಮಟ್ಟದ ತಂಬಾಕಿಗೆ ಸೂಕ್ತ ಬೆಲೆ ನೀಡುವಂತೆ ಈಗಾಗಲೇ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ಕಳೆದ ಬಾರಿ ಕೆಲವೊಂದು ವ್ಯತ್ಯಾಸಗಳಿಂದ ತಂಬಾಕು ರೈತರಿಗೆ ಸೂಕ್ತ ಬೆಲೆ ಸಿಗದೇ ಗೊಂದಲಗಳು ಉಂಟಾಗಿದ್ದವು. ಆದರೆ, ಈ ಬಾರಿ ಗೊಂದಲಗಳಿಗೆ ತೆರೆ ಎಳೆಯಲು ತಂಬಾಕು ಖರೀದಿ ಕಂಪನಿಗಳ ಜೊತೆ ಚರ್ಚಿಸಿ ಸೂಕ್ತ ಬೆಲೆ ನೀಡುವಂತೆ ಸೂಚಿಸಲಾಗಿದೆ, ಅದರಿಂದ ಇಂದು ಪ್ರಾರಂಭದ ದಿನ ಐದು ಕಂಪನಿಗಳು ಖರೀದಿಯಲ್ಲಿ ಭಾಗವಹಿಸಿದ್ದು, 9 ಬ್ಯಾಂಕ್ ಗಳು ಗ್ಯಾರೆಂಟಿಯ ಬಗ್ಗೆ ಬೆಂಬಲ ಸೂಚಿಸಿವೆ. ಇನ್ನು ಕೆಲವು ದಿನಗಳಲ್ಲಿ ಆಂಧ್ರಪ್ರದೇಶ ಹರಾಜು ಮಾರುಕಟ್ಟೆ ಮುಗಿಯಲಿದ್ದು, ನಂತರ 21 ಕಂಪನಿಗಳು ತಂಬಾಕು ಖರೀದಿಯಲ್ಲಿ ಭಾಗವಹಿಸಲಿವೆ. ಆದ್ದರಿಂದ ತಂಬಾಕು ಖರೀದಿಗಾರರು ತಂಬಾಕು ಬೆಲೆಯಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ರೈತರ ಮನವಿ :
ಕೋವಿಡ್ನಂತಹ ಸಂಕಷ್ಟದಲ್ಲಿ ಉತ್ತಮ ತಂಬಾಕು ಬೆಳೆಯನ್ನು ಬೆಳೆದು ರೈತರು ಮಾರುಕಟ್ಟೆಗೆ ತಂಬಾಕು ತಂದಿದ್ದಾರೆ. ಒಂದು ಕೆಜಿ ತಂಬಾಕು ಬೆಳೆಯಲು 150 ರೂಪಾಯಿ ವೆಚ್ಚವಾಗುತ್ತದೆ ಜೊತೆಗೆ ಇಡೀ ಕುಟುಂಬವೇ ಶ್ರಮವಹಿಸಿ ಈ ಕೆಲಸ ಮಾಡಿದ್ದಾರೆ. ಆದ್ದರಿಂದ ಸೂಕ್ತ ಬೆಲೆಯನ್ನು ಘೋಷಿಸಬೇಕು ಕನಿಷ್ಠ 250 ರೂಪಾಯಿ ಬೆಲೆಯನ್ನಾದರೂ ಒಂದು ಕೆಜಿ ತಂಬಾಕಿಗೆ ನೀಡಬೇಕು ಎಂದು ರೈತರು ಮನವಿ ಮಾಡಿದರು. ಆದರೆ, ಪ್ರಾರಂಭಿಕವಾಗಿ 175 ರೂಪಾಯಿ ಕೆಜಿಯಂತೆ ತಂಬಾಕು ಕೊಳ್ಳಲು ಬೆಲೆಯನ್ನು ನಿಗದಿ ಮಾಡಲಾಗಿದೆ.