ಮೈಸೂರು: ಮೋಸ ಮತ್ತು ಶೋಷಣೆಗೊಳಗಾದ ಮಹಿಳೆಯರಿಗೆ ನ್ಯಾಯ ಹಾಗೂ ಅತ್ಯಾಚಾರಿಗಳಿಗೆ ಮರಣದಂಡನೆ ನೀಡಬೇಕು ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಪ್ರಮಿಳಾ ನಾಯ್ಡು ಹೇಳಿದರು.
ಇಂದು ನಗರದ ಜಲದರ್ಶಿನಿ ಅಥಿತಿ ಗೃಹದಲ್ಲಿ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ಮೋಸ ಮತ್ತು ಶೋಷಣೆಗೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸುವ ಪ್ರಯತ್ನದಲ್ಲಿದ್ದೇವೆ. ಕೌಟುಂಬಿಕ ಸಮಸ್ಯೆಯನ್ನು ನಾನು ಖುದ್ದಾಗಿ ನೋಡಿಕೊಳ್ಳುತ್ತೇನೆ. ಅವರಿಗೆ ಕೌನ್ಸೆಲಿಂಗ್ ನೀಡಿ ಅವರ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಬಗೆಹರಿಸುತ್ತಿದ್ದೇವೆ. ಮಂಡ್ಯ ಜಿಲ್ಲೆಯ ಅಪ್ರಾಪ್ತ ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿ, ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಆಗ್ರಹಿಸಿದರು.
ರಾಜ್ಯದಲ್ಲಿ 2020ರ ಏಪ್ರಿಲ್ನಿಂದ ನವೆಂಬರ್ವರೆಗೆ ಒಟ್ಟು 1558 ಕೇಸ್ಗಳು ಮಹಿಳಾ ಆಯೋಗದಲ್ಲಿ ದಾಖಲಾಗಿದ್ದು, ಅದರಲ್ಲಿ 446 ಮಹಿಳೆಯರು ರಕ್ಷಣೆ ಬೇಕೆಂದು ದೂರು ನೀಡಿದ್ದಾರೆ. 426 ಸುಮೊಟೋ ಕೇಸ್ಗಳನ್ನು ದಾಖಲು ಮಾಡಿದ್ದೇವೆ. 52 ವರದಕ್ಷಿಣೆ ಕಿರುಕುಳ ಕೇಸ್ಗಳು. ಇದರ ಜೊತೆಗೆ ಕೆಲಸದ ಸ್ಥಳದಲ್ಲಿ ಆದ ಅನ್ಯಾಯ ಮತ್ತು ದೌರ್ಜನ್ಯದ ಕುರಿತು 58 ಕೇಸ್ ದಾಖಲಾಗಿದ್ದು, ಇದರಲ್ಲಿ 506 ಕೇಸ್ಗಳನ್ನು ಸಂಪೂರ್ಣವಾಗಿ ಬಗೆಹರಿಸಿದ್ದೇವೆ. ಈ ಒಟ್ಟು ಕೇಸ್ಗಳಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ ವ್ಯಾಪ್ತಿಯಲ್ಲಿ 224 ಕೇಸ್ ದಾಖಲಾಗಿವೆ. ಅದರಲ್ಲಿ ಹೆಚ್ಚು ಆಸ್ತಿ ವಿವಾದ ಮತ್ತು ರಕ್ಷಣೆ ಕೇಸ್ಗಳಿದ್ದು, ಇವೆಲ್ಲವನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಪ್ರಮಿಳಾ ನಾಯ್ಡು ತಿಳಿಸಿದರು.