ಮೈಸೂರು: ಪ್ರಧಾನಿ ನರೇಂದ್ರ ಮೋದಿಯವರು ತುಂಬಾ ಬ್ಯುಸಿಯಾಗಿ ಇರುತ್ತಾರೆ. ಆದಾಗ್ಯೂ ನಮಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ನಾವು ಚೆನ್ನಾಗಿದ್ದೇವೆ ಎಂದು ತಿಳಿಸಿದ್ದೇವೆ ಎಂದು ನಿನ್ನೆ ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರು ಹೇಳಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನೆಯ ಘಟನೆ ಹಾಗೂ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದರು.
ಕಾರು ಅಪಘಾತ ಮಾಹಿತಿ.. ಇಂದು ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ, ನಿನ್ನೆ ಬೆಂಗಳೂರಿನ ನಮ್ಮ ಸ್ನೇಹಿತನ ಎರಡು ಕಾರಿನಲ್ಲಿ ನಾನು ಮತ್ತು ನನ್ನ ಕುಟುಂಬದವರು ಬಂಡೀಪುರಕ್ಕೆ ಹೊರಟಿದ್ದೆವು. ನಾವಿದ್ದ ಕಾರಿನಲ್ಲಿ ಮಗ ಮೇಹುಲ್ ಪ್ರಹ್ಲಾದ್ ಮೋದಿ(40) ಮತ್ತು ಸೊಸೆ ಜಿಂದಾಲ್ ಮೋದಿ (35), ಮೊಮ್ಮಗ ಮೇನಥ್ ಮೇಹುಲ್ ಮೋದಿ (6), ಡ್ರೈವರ್ ಸತ್ಯನಾರಾಯಣ(46) ಸೇರಿ ಐದು ಜನರಿದ್ದೆವು. ಕಾರು ಅಪಘಾತವಾಯಿತು. ತಕ್ಷಣ ಕಮಾಂಡೋಗಳ ರೀತಿಯಲ್ಲಿ ಜನರು ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು. ಇಲ್ಲಿ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಿದರು. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.
ಚಾಲಕನ ತಪ್ಪಿಲ್ಲ.. ಅಪಘಾತ ಆಗಬಾರದಿತ್ತು, ಆಗಿ ಹೋಗಿದೆ. ನನಗೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ವಿರೋಧ ಪಕ್ಷದವರೂ ಸಹ ಆತ್ಮ ವಿಶ್ವಾಸ ತುಂಬಿದ್ದಾರೆ. ಅಪಘಾತದಲ್ಲಿ ಚಾಲಕನದ್ದು ತಪ್ಪಿಲ್ಲ. ಈ ಕಾರು ನನ್ನ ಸ್ನೇಹಿತ ರಾಜಶೇಖರ್ ಅವರಿಗೆ ಸೇರಿದ್ದು. ನಾನು ಇಲ್ಲಿಗೆ ಬಂದಾಗ ಅವರ ಕಾರನ್ನೇ ಉಪಯೋಗಿಸಿಕೊಳ್ಳುತ್ತಿದ್ದೆ. ನಿನ್ನೆ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಾಗ ಕಾರ್ನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದು, ನಾವೆಲ್ಲ ಸುರಕ್ಷಿತವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲೂ ನಮ್ಮ ಪರಿವಾರ.. ಮಂಗಳವಾರ ಅಪಘಾತ ಆದ ನಂತರ ಎಲ್ಲರೂ ನಮಗೆ ಸ್ಪಂದಿಸಿದ ರೀತಿ ನೋಡಿದರೆ ಕರ್ನಾಟಕದಲ್ಲೂ ಕೂಡ ನಮಗೆ ಪರಿವಾರ ಇದೆ ಎಂಬ ಭಾವನೆ ಉಂಟಾಗಿದೆ. ಪ್ರಧಾನಿ ಮೋದಿ ಅವರು ಬ್ಯುಸಿ ಇರುತ್ತಾರೆ. ಆದರೂ ಸಹ ಅವರು ಕರೆ ಮಾಡಿ ಅರೋಗ್ಯ ವಿಚಾರಿಸಿದ್ದು, ನಾವು ಚೆನ್ನಾಗಿದ್ದೇವೆ ಎಂದು ಅವರಿಗೆ ತಿಳಿಸಿದ್ದೇವೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಗುಜರಾತ್ಗೆ ಮರಳುತ್ತೇವೆ ಎಂದು ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ತಿಳಿಸಿದರು.
ಪ್ರತಾಪ್ ಸಿಂಹ ಪ್ರತಿಕ್ರಿಯೆ: ಚಾಲಕ ನಿದ್ರೆ ಮಂಪರಿನಲ್ಲಿದ್ದ ಕಾರಣ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಗುವಿಗೆ ಸ್ವಲ್ಪ ಜಾಸ್ತಿ ಪೆಟ್ಟು ಬಿದ್ದಿದೆ ಎಂದು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ನಂತರ ಪ್ರತಾಪ್ ಸಿಂಹ ನಿನ್ನೆ ಮಾಧ್ಯಮದವರಿಗೆ ಮಾಹಿತಿ ನೀಡಿದ್ದರು.
ಸುತ್ತೂರು ಶ್ರೀಗಳ ಪ್ರತಿಕ್ರಿಯೆ: ಅಪಘಾತವಾದ ಶಾಕ್ನಿಂದ ಎಲ್ಲರೂ ಹೊರಬಂದಿದ್ದಾರೆ. ಮೊಮ್ಮಗು ಕೂಡ ನಮ್ಮ ಜೊತೆ ಮಾತನಾಡಿದೆ. ಚಾಲಕ ಕೂಡ ಆರಾಮಾಗಿದೆ ಎಂದು ಗಾಯಾಳುಗಳನ್ನು ಮಾತನಾಡಿಸಿಕೊಂಡು ಬಂದ ನಂತರ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದ್ದರು.
ಶಾಸಕ ರಾಮದಾಸ್ ಹೇಳಿಕೆ: ಇದೊಂದು ಅನಿರೀಕ್ಷಿತ ಘಟನೆ. ಸ್ವಲ್ಪ ದಿನ ಎಲ್ಲರೂ ಚಿಕಿತ್ಸೆ ಪಡೆದು ಮುಂದಿನ ಪ್ರಯಾಣ ಮಾಡಬಹುದು. ಯಾರ ಆರೋಗ್ಯದಲ್ಲೂ ತೊಂದರೆ ಇಲ್ಲ. ಸಿಎಂ, ದೆಹಲಿ, ಅಹಮಾದಬಾದ್ಗೆ ನಿರಂತರವಾಗಿ ಮಾಹಿತಿ ಕಳುಹಿಸುವ ಕೆಲಸವಾಗುತ್ತಿದೆ ಎಂದು ನಿನ್ನೆ ಮಾಧ್ಯಮಗಳಿಗೆ ರಾಮದಾಸ್ ತಿಳಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
ತಾಯಿ ಹೀರಾಬೆನ್ ಮೋದಿ ಅನಾರೋಗ್ಯ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ, ಶತಾಯುಷಿ ಹೀರಾಬೆನ್ ಮೋದಿ ಅವರ ಆರೋಗ್ಯದಲ್ಲಿ ಇಂದು ಏರುಪೇರಾಗಿದೆ. ಅವರನ್ನು ಸ್ಥಳೀಯ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಪುತ್ರ, ಪ್ರಧಾನಿ ಮೋದಿ ಅವರು ಅಹಮದಾಬಾದ್ಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲೆ ಅಲರ್ಟ್ ಘೋಷಿಸಲಾಗಿದೆ. ನರೋಡಾ, ಸರ್ದಾರ್‌ನಗರ ಹಾಗೂ ವಿಮಾನ ನಿಲ್ದಾಣದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಬಂಡೀಪುರಕ್ಕೆ ತೆರಳುತ್ತಿದ್ದಾಗ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ