ಮೈಸೂರು: ಅಗತ್ಯವಿದ್ದರೆ ಪೊಲೀಸ್ ಸ್ಟೇಷನ್ಗಳನ್ನು ಸಹ ಸೀಲ್ ಡೌನ್ ಮಾಡುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕೆ.ಆರ್.ಪೇಟೆಯ ಎರಡು ಪೊಲೀಸ್ ಠಾಣೆಯನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ. ಬೆಂಗಳೂರಿನ ಒಂದು ಸ್ಟೇಷನ್ಅನ್ನು ಸಹ ಅಗತ್ಯ ಬಿದ್ದರೆ ಸೀಲ್ ಡೌನ್ ಮಾಡುತ್ತೇವೆ. ಕೊರೊನಾ ಸಂದರ್ಭದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. 55 ವರ್ಷ ಮೇಲ್ಪಟ್ಟ ಪೊಲೀಸರಿಗೆ ಠಾಣೆಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದರು.
ಅಂತರ್ರಾಜ್ಯ ಗಡಿ ಭಾಗದಿಂದ ನಮ್ಮ ರಾಜ್ಯದೊಳಗೆ ಯಾರೂ ಬರದಂತೆ ಬಿಗಿಯಾದ ಕ್ರಮ ಕೈಗೊಂಡಿದ್ದು, ಜಿಲ್ಲೆ ಒಳಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಗಳ ಪರಿಸ್ಥಿತಿಯನ್ನು ನೋಡಿ ಅಲ್ಲಿಯ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ ಎಂದರು.
ಸೋನಿಯಾ ಗಾಂಧಿ ಮೇಲೆ ಪ್ರಕರಣ ದಾಖಲಿಸಿರುವ ಅಧಿಕಾರಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸುಪ್ರೀಂಕೋರ್ಟ್ ಜಡ್ಜ್ಮೆಂಟ್ ಇದೆ. ಅದರ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಇವೆಲ್ಲವೂ ತನಿಖೆಯ ಭಾಗ. ಖಾಸಗಿ ಇಂಗ್ಲಿಷ್ ವಾಹಿನಿಯ ಸಂಪಾದಕರ ವಿರುದ್ಧ ರಾಜ್ಯದಲ್ಲೇ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದನ್ನು ಕಾಂಗ್ರೆಸ್ನವರೇ ಹಾಕಿದ್ದಾರೆ. ಆಗ ಇದು ಕಾಂಗ್ರೆಸ್ನವರಿಗೆ ಹೊಳೆಯಲಿಲ್ಲವೇ ಎಂದು ಪ್ರಶ್ನಿಸಿದರು.