ಮೈಸೂರು: ನಗರದ ವಿದ್ಯಾರಣ್ಯಪುರಂನ ಚಿನ್ನದಂಗಡಿ ದರೋಡೆ ಹಾಗೂ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟಿದ್ದ ಯುವಕ ಚಂದ್ರು ಕುಟುಂಬಸ್ಥರಿಗೆ ಪೊಲೀಸರು ತಮಗೆ ಬಂದಿದ್ದ ಬಹುಮಾನದ ಹಣವನ್ನು ನೀಡಿ ಮಾದರಿಯಾಗಿದ್ದಾರೆ.
ಶೂಟೌಟ್ ಪ್ರಕರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಕಾರ ಐದು ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಅಭಿನಂದಿಸಿತ್ತು. ಇದರಲ್ಲಿ 1 ಲಕ್ಷ ರೂಪಾಯಿಯನ್ನು ಮೃತ ಚಂದ್ರುವಿನ ಕುಟುಂಬಸ್ಥರಿಗೆ ಪೊಲೀಸರು ನೀಡಿದ್ದಾರೆ.
ಮೃತ ಚಂದ್ರು ತಂದೆ ರಂಗಸ್ವಾಮಿ ಹಾಗೂ ತಾಯಿ ರಾಜಮ್ಮ ಅವರಿಗೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿ ಪ್ರದೀಪ್ ಗುಂಟಿ ಹಾಗೂ ಗೀತಾ ಪ್ರಸನ್ನ ಅವರ ಸಮ್ಮುಖದಲ್ಲಿ ನಗದನ್ನು ಹಸ್ತಾಂತರಿಸಲಾಗಿದೆ.
ವಿದ್ಯಾರಣ್ಯಪುರಂನ ಮುಖ್ಯ ರಸ್ತೆಯಲ್ಲಿರುವ ಅಮೃತ್ ಚಿನ್ನಾಭರಣ ಅಂಗಡಿಗೆ ಆಭರಣ ಖರೀದಿಗೆಂದು ಬಂದಾಗ ದುಷ್ಕರ್ಮಿಗಳು ಅದೇ ಚಿನ್ನದಂಗಡಿಯಲ್ಲಿ ದರೋಡೆ ನಡೆಸಿ ಪರಾರಿಯಾಗುವ ವೇಳೆ ಗುಂಡು ಹಾರಿಸಿದ್ದರು. ಈ ವೇಳೆ ಗುಂಡು ಯುವಕ ಚಂದ್ರುಗೆ ತಗುಲಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದ.
ಇದನ್ನೂ ಓದಿ: ಮೈಸೂರು ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿಲ್ಲ: DCP ಪ್ರದೀಪ್ ಗುಂಟಿ