ಮೈಸೂರು: ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್‌ಗೆ ದುಷ್ಕರ್ಮಿಗಳು ಕ್ರಿಮಿನಾಶಕ ಬೆರೆಸಿದ್ದು, ಗ್ರಾಮಸ್ಥರ ಜಾಗೃತಿಯಿಂದ ದೊಡ್ಡ ಅನಾಹುತ ತಪ್ಪಿದೆ. ಈ ಘಟನೆ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಟ್ಯಾಂಕ್ನಿಂದ ನಲ್ಲಿಗಳಿಗೆ ನೀರು ಬಿಟ್ಟಾಗ ವಾಸನೆ ಬಂದಿದ್ದರಿಂದ ಜನರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿಷ ಬೆರೆಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ವಿಷಯ ತಿಳಿಯದೆ ಕೆಲವರು ಈ ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಜಾನುವಾರುಗಳೂ ಕೂಡಾ ತೊಂದರೆಗೀಡಾಗಿವೆ ಎಂಬ ಮಾಹಿತಿ ದೊರೆತಿದೆ.
ನೀರಿನ ಟ್ಯಾಂಕ್‌ಗೆ ಕ್ರಿಮಿನಾಶಕ ಬೆರೆಸಿದ್ದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ವಿಷಯ ತಿಳಿದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್ ಮತ್ತು ನಂಜನಗೂಡು ಡಿವೈಎಸ್ಪಿ ಗೋವಿಂದರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭತ್ತದ ಗದ್ದೆಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿಯನ್ನು ನೀರಿಗೆ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಟ್ಯಾಂಕರ್ ಮೂಲಕ ಗ್ರಾಮಸ್ಥರಿಗೆ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಮವನ್ನೇ ಸ್ಮಶಾನ ಮಾಡಲು ಪ್ರಯತ್ನಿಸಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.