ಮೈಸೂರು: ಲಾಕ್ಡೌನ್ ಸಡಿಲಿಕೆ ಹಿನ್ನೆಲೆ ಟ್ಯಾಕ್ಸಿ ಸಂಚಾರಕ್ಕೆ ಸರ್ಕಾರ ಅನುಮತಿ ಕೊಟ್ಟರೂ ಪ್ರಯಾಣಿಕರು ಬರದಿರುವುದರಿಂದ ಟ್ಯಾಕ್ಸಿ ಚಾಲಕರಿಗೆ ಸಿಡಿಲು ಬಡಿದಂತಾಗಿದೆ. ಲಾಕ್ಡೌನ್ ಕಾರಣ ಎರಡು ತಿಂಗಳಿನಿಂದ ವನವಾಸ ಅನುಭವಿಸಿದ್ದ ಟ್ಯಾಕ್ಸಿ ಡ್ರೈವರ್ಗಳಿಗೆ, ಸರ್ಕಾರವೇನೋ ಸಹಾಯಧನದ ಭರವಸೆ ನೀಡಿತ್ತು. ಆದರೆ ಪ್ರಯಾಣಿಕರೇ ಬಾರದಿರುವುದರಿಂದ ಟ್ಯಾಕ್ಸಿ ನಿಲ್ದಾಣದಲ್ಲಿ ಕಾರುಗಳು ಬಾಡಿಗೆ ಇಲ್ಲದೆ ನಿಂತಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರವೇನೋ ಮೂರು ತಿಂಗಳು ಇಎಂಐ ಕಟ್ಟದಂತೆ, ವಾಹನ ತೆರಿಗೆ ಕಟ್ಟದಂತೆ ಚಾಲಕರಿಗೆ ಸೂಚನೆ ನೀಡಿದೆ. ಆದರೆ, ಮೂರು ತಿಂಗಳ ನಂತರ ನಮ್ಮ ಗತಿಯೇನು ಎಂಬ ಚಿಂತೆ ಚಾಲಕರಲ್ಲಿ ಗಾಢವಾಗಿ ಕಾಡತೊಡಗಿದೆ. ಚಾಲಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ 5,000 ರೂಪಾಯಿ ನೀಡುತ್ತಿದೆ. ಅದನ್ನು ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಿರುವುದರಿಂದ 'ಸೇವಾಸಿಂಧು' ವೆಬ್ ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.
ಆದರೆ, ವೆಬ್ಸೈಟ್ನಲ್ಲಿ ಕೇಳಿರುವ ದಾಖಲೆಗಳನ್ನು ಒದಗಿಸಲಾಗದೇ ಚಾಲಕರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ನಗರ ಪ್ರದೇಶದಲ್ಲಿ ಮಾತ್ರ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ, ಆದರೆ, ನಗರ ವಾಸಿಗಳು ಟ್ಯಾಕ್ಸಿ ಬಳಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಚಾಲಕ ಅಲ್ತಾಫ್ ಅಳಲು ತೋಡಿಕೊಂಡಿದ್ದಾರೆ.
ಕೊರೊನಾ ಪ್ರಕರಣಗಳು ಮೈಸೂರಿನಲ್ಲಿ ಜಾಸ್ತಿ ಇದ್ದಾಗ ಕ್ವಾರಂಟೈನ್ನಲ್ಲಿರುವವರ ಆರೋಗ್ಯ ತಪಾಸಣೆ ಮಾಡಲು ವೈದ್ಯರಿಗೆ ಸರ್ಕಾರ ಸೂಚನೆಯಂತೆ ಕಾರು ಒದಗಿಸಿದ್ದೀವಿ. ನಮಗೂ ಸರ್ಕಾರ ಇಂತಹ ಸಂದರ್ಭಗಳಲ್ಲಿ ಅಗತ್ಯ ನೆರವು ನೀಡಬೇಕು ಎಂಬುವುದು ಚಾಲಕರ ಮನವಿಯಾಗಿದೆ.