ಮೈಸೂರು: ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರಥಮ ಬಾರಿಗೆ ಆನೆಗಳೊಂದಿಗೆ ಹೆಜ್ಜೆ ಹಾಕುತ್ತೇವೆ ಎಂದು ಆಸೆಯಿಂದ ಬಂದಿದ್ದ ಮಾವುತರು ಹಾಗೂ ಕಾವಾಡಿಗಳಿಗೆ ನಿರಾಸೆಯಾಗಿದೆ.
ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಂಡಿರುವ ಪಾರ್ಥ ಸಾರಥಿ, ಶ್ರೀರಾಮ, ಸುಗ್ರೀವ ಆನೆಗಳಿಗೆ ಹಿರಿಯ ಆನೆಗಳೊಂದಿಗೆ ಮೊದಲಿನಿಂದ ತಾಲೀಮು ನೀಡಲಾಗಿತ್ತು. ಈ ತಾಲೀಮಿನಲ್ಲಿ ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದ ನಮ್ಮ ಆನೆಗಳು, ಲಕ್ಷಾಂತರ ಜನರ ಮಧ್ಯೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂಬ ಸಂಭ್ರಮದಲ್ಲಿ ಮಾವುತರು ಹಾಗೂ ಕಾವಾಡಿಗಳು ಇದ್ದರು. ಆದರೆ, ಮೂರು ದಿನಗಳ ಹಿಂದೆ ಈ ಆನೆಗಳು ಜಂಬೂ ಸವಾರಿಯಲ್ಲಿ ಹೋಗುವುದಿಲ್ಲ ಎಂದು ಅರಣ್ಯಾಧಿಕಾರಿಗಳು ಹೇಳಿದಾಗ, ಮಾವುತರು ಮತ್ತು ಕಾವಾಡಿಗಳಿಗೆ ಬೇಸರ ಮೂಡಿಸಿದೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುತ್ತಾರೆ. ಅಲ್ಲದೇ, ಕಲಾ ತಂಡಗಳ ಶಬ್ಧ ಹಾಗೂ ಜನರ ಕೂಗಾಟಗಳಿಂದ ಆನೆಗಳು ಬೆಚ್ಚಿದರೆ ಕಷ್ಟವಾಗಲಿದೆ. ಆದ್ದರಿಂದ ಆನೆಗಳನ್ನು ಅರಮನೆಯಲ್ಲಿ ಉಳಿಸಿಕೊಳ್ಳಿ, ಮುಂದಿನ ಬಾರಿ ಅವಕಾಶ ಕೊಡೋಣವೆಂದು ಅಧಿಕಾರಿಗಳು, ಮಾವುತರು ಹಾಗೂ ಕಾವಾಡಿಗಳಿಗೆ ಹೇಳಿದ್ದಾರೆ.
ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ಜಂಬೂ ಸವಾರಿ: ಬನ್ನಿಮಂಟಪದ ಪಂಜಿನ ಕವಾಯತಿನಿಂದ ಕಾರ್ಯಕ್ರಮಕ್ಕೆ ತೆರೆ
ಜಂಬೂ ಸವಾರಿಯಲ್ಲಿ ನಾವು ಕೂಡ ಆನೆಗಳ ಜೊತೆ ಹೋಗಬಹುದು ಎಂದುಕೊಂಡಿದ್ದೆವು. ಆದರೆ, ಅಧಿಕಾರಿಗಳು ಹೇಳಿದ ಮೇಲೆ ಬೇಸರವಾಯಿತು. ಆನೆಗಳು ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಯಾಕೆ ಅಂತ ನಾವು ಸುಮ್ಮನಾದೆವು ಎಂದು ತಮ್ಮ ಹೆಸರು ಹೇಳದೇ ಮಾವುತರು ಹಾಗೂ ಕಾವಾಡಿಗಳು ಬೇಸರ ವ್ಯಕ್ತಪಡಿಸಿದರು.