ಮೈಸೂರು : ಚಾಮುಂಡಿಬೆಟ್ಟದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವವರನ್ನು ಎನ್ಕೌಂಟರ್ ಮಾಡಬೇಡಿ ಎಂದು ಆರೋಪಿಗಳ ಪೋಷಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೃತ್ಯ ನಡೆಸಿದ ದಿನ ಧರಿಸಿದ್ದ ಬಟ್ಟೆ ಹಾಗೂ ಹಲ್ಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಮೈಸೂರು ಪೊಲೀಸರು ತಮಿಳುನಾಡಿನಲ್ಲಿರುವ ಆರೋಪಿಗಳ ಮನೆಗೆ ತೆರಳಿದ್ದರು. ಈ ವೇಳೆ ಆರೋಪಿಗಳ ಪೋಷಕರು ಬಂಧಿತರಾಗಿರುವ ತಮ್ಮವರನ್ನು ಎನ್ಕೌಂಟರ್ ಮಾಡದಂತೆ ಕಣ್ಣೀರಿಡುತ್ತಾ ಕೈಮುಗಿದು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕರ್ನಾಟಕ ಪೊಲೀಸರು ಆರೋಪಿಗಳನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡುತ್ತಾರೆ ಎಂಬ ಸುದ್ದಿ ಸತ್ಯಮಂಗಲ, ಈರೋಡ್, ತಾಳವಾಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬಿದೆ. ಅಲ್ಲದೆ ಸ್ಥಳೀಯ ಮಾಧ್ಯಮಗಳು ಹೆಚ್ಚಾಗಿ ರಾಜಕಾರಣಿಗಳು ನೀಡಿದ ಹೇಳಿಕೆಯನ್ನು ಪ್ರಧಾನವಾಗಿ ಬಿತ್ತರ ಮಾಡಿವೆ. ಇದರಿಂದ ಆರೋಪಿಗಳು ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಇದರೊಂದಿಗೆ 7ನೇ ಆರೋಪಿಯ ಸುಳಿವು ನೀಡಿದರೆ ಪೊಲೀಸರು ಎನ್ಕೌಂಟರ್ ಮಾಡಬಹುದು ಎಂಬ ಭಯದಿಂದ ಆರೋಪಿಯ ಸಂಬಂಧಿಕರು, ಸ್ನೇಹಿತರು ಹಾಗೂ ಸಾರ್ವಜನಿಕರು ಮೌನವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಓದಿ: ರಾಜ್ಯಮಟ್ಟದ 'ಉತ್ತಮ ಶಿಕ್ಷಕರ ಪ್ರಶಸ್ತಿ' ಪಟ್ಟಿ ಪ್ರಕಟ: ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಹೆಸರು ಇಲ್ಲಿದೆ..