ಮೈಸೂರು : ರಾಮಜನ್ಮಭೂಮಿಯನ್ನು ನಾವು ಹೋರಾಟ ಮಾಡಿ ಪಡೆದಿದ್ದೇವೆ. ನಂತರ ನಮ್ಮ ಮುಂದಿನ ಗುರಿ ಕೃಷ್ಣಜನ್ಮಭೂಮಿ ಹಾಗೂ ಕಾಶಿವಿಶ್ವನಾಥ ಮಂದಿರಗಳಾಗಿವೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ಮೈಸೂರು ಹಿಂದೂ ಫೋರಂ ವತಿಯಿಂದ ಸದರ್ನ್ ಸ್ಟಾರ್ ಹೋಟೆಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಒಂದೇ ಒಂದು ಗುಂಡು ಹಾರದ ಹಾಗೆ ರಾಮಮಂದಿರವನ್ನು ಕಟ್ಟುತ್ತಿದ್ದೇವೆ.
ಹಾಗೆಯೇ, ಕೃಷ್ಣಜನ್ಮಭೂಮಿಯಾದ ಮಥುರಾ ಹಾಗೂ ಕಾಶಿಯಲ್ಲಿರುವ ವಿಶ್ವನಾಥ ಮಂದಿರಕ್ಕೆ ಸಂಬಂಧಿಸಿದಂತಿರುವ ಹಿಂದೂ-ಮುಸ್ಲಿಂ ವಿವಾದಗಳನ್ನೂ ಶಾಂತಿಯುತವಾಗಿಯೇ ಬಗೆಹರಿಸುತ್ತೇವೆ. ಅಲ್ಲಿಯೂ ಶಾಂತಿಯುತ ವಾತಾವರಣ ನಿರ್ಮಾಣ ಮಾಡುತ್ತೇವೆ ಎಂದರು.
ಹಿಂದೂ ಮತ್ತು ಮುಸ್ಲಿಮರೂ ಸೇರಿದಂತೆ ಎಲ್ಲ ಭಾರತೀಯರ ಡಿಎನ್‌ಎಗಳು ಒಂದೇ ಆಗಿವೆ. ಹೈದರಬಾದಿನ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಇದು ಸಾಬೀತಾಗಿದೆ. ಹಿಂದೂಗಳು ಹೊರ ದೇಶಗಳಿಂದ ಬಂದಿದ್ದಲ್ಲ. ಭೂಮಿ ಹುಟ್ಟಿದಾಗಿನಿಂದಲೂ ಅವರು ಭಾರತದಲ್ಲೇ ಇದ್ದಾರೆ. ಭಾರತ ಹಿಂದೂ ರಾಷ್ಟ್ರ ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಒಡೆಯಲು ರಾಜಮನೆತನದ ವಿರೋಧ
ಚೀನಾವನ್ನು ಸೋಲಿಸುವವರೆಗೂ ಭಾರತ ಸೂಪರ್ ಪವರ್ ಆಗಲು ಸಾಧ್ಯವೇ ಇಲ್ಲ. ಭಾರತೀಯರು ಸರ್ಕಸ್‌ನಲ್ಲಿನ ಸಿಂಹದಂತಿರುವುದನ್ನು ಇನ್ನಾದರೂ ಬಿಡಬೇಕು. ಕಾಡಿನ ಸಿಂಹದ ಹಾಗೆ ವರ್ತಿಸಬೇಕು ಎಂದು ಸಲಹೆ ನೀಡಿದರು.
ಆರ್ಯ ಮತ್ತು ದ್ರಾವಿಡ ಎಂಬುದು ಜನಾಂಗಳಲ್ಲ. ದಕ್ಷಿಣ ಭಾರತದಲ್ಲಿದ್ದವರನ್ನು ದ್ರಾವಿಡರು ಎಂದು ಕರೆಯಲಾಯಿತು. ಹಾಗೆಯೇ ಉತ್ತಮ ನಡವಳಿಕೆ ಇದ್ದ ವ್ಯಕ್ತಿಗಳನ್ನು ಆರ್ಯರು ಎನ್ನಲಾಯಿತು. ಇವೆರಡೂ ನಿರ್ದಿಷ್ಟವಾದ ಜನಾಂಗಳಲ್ಲ ಎಂದು ಇದೇ ವೇಳೆ ತಿಳಿಸಿದರು.