ಮೈಸೂರು: ಅಪಘಾತಕ್ಕೆ ಒಳಗಾಗಿದ್ದ ಇಬ್ಬರು ಮಹಿಳೆಯರ ಮೆದುಳು ನಿಷ್ಕ್ರಿಯವಾಗಿತ್ತು. ಅವರ ಕುಟುಂಬಸ್ಥರು ಒಪ್ಪಿಗೆ ಮೇರೆಗೆ ಈ ಮಹಿಳೆಯರ ಅಂಗಾಂಗಳನ್ನು ದಾನ ಮಾಡಲಾಯಿತು. ಇಬ್ಬರು ಮಹಿಳೆಯರ ಅಂಗಾಂಗ ದಾನ ಮಾಡಿದ್ದರಿಂದ ಹತ್ತು ಮಂದಿ ಜೀವನಕ್ಕೆ ಆಸರೆಯಾಗಿದೆ. ನಗರದ ಬೆಲ್ಲವತ್ತ ಬಳಿ ಸಂಭವಿಸಿದ ರಸ್ತೆ ಅಪಘಾತ ಒಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸುಧಾ (48) ಎಂಬುವವರನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ ಬಳಿಕ, ಅಂಗಾಂಗ ದಾನಕ್ಕೆ ಕುಟುಂಬಸ್ಥರು ಮುಂದೆ ಬಂದಿದ್ದಾರೆ.
ಜೊತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಜು.10 ರಂದು ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಮತಿ ಗಂಗಾಂಬಿಕೆ (73) ಅವರಿಗೆ ಮೂರು ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಸಂಬಂಧಿಕರು ಗಾಂಗಾಬಿಕೆಯ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ.
ಹತ್ತು ಮಂದಿ ಬದುಕಿಗೆ ನೆರವಾದ ಮಹಿಳೆಯರು: ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರ ಅಂಗಾಂಗಗಳನ್ನು ಸಂಬಂಧಿಕರ ಒಪ್ಪಿಗೆಯ ನಂತರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬೇರೆ ರೋಗಿಗಳಿಗೆ ಕಸಿ ಮಾಡಲಾಗಿದೆ. ಸುಧಾ ಎಂಬುವವರ ದೇಹದಿಂದ ಯಕೃತ್ತು, ಎಡ ಮೂತ್ರಪಿಂಡವನ್ನು ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಮತ್ತೊಂದು ಮೂತ್ರಪಿಂಡ, ಹೃದಯ ಕವಾಟಗಳು, ಕಣ್ಣಿನ ಕಾರ್ನಿಯಾ, ಶ್ವಾಸಕೋಶಗಳನ್ನು ಬೇರೆ ಆಸ್ಪತ್ರೆಗೆ ರವಾನಿಸಲಾಗಿದ್ದು, ಆ ಮೂಲಕ ಸುಧಾ ಅವರು 6 ಮಂದಿ ಬದುಕಿಗೆ ನೆರವಾಗಿದ್ಧಾರೆ.
ಗಂಗಾಂಬಿಕೆ ಅವರ ಸಂಬಂಧಿಕರ ಒಪ್ಪಿಗೆ ಪಡೆದ ನಂತರ ಅವರ ದೇಹದಿಂದ ಯಕೃತ್ತು ಹಾಗೂ ಎರಡು ಮೂತ್ರಪಿಂಡಗಳನ್ನು ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಕಸಿ ಮಾಡಲಾಯಿತು. ಕಣ್ಣಿನ ಕಾರ್ನಿಯಾವನ್ನು ಬೇರೆ ಆಸ್ಪತ್ರೆಯ ರೋಗಿಗೆ ಕಸಿ ಮಾಡಲಾಗಿದ್ದು, ಒಟ್ಟು 4 ಜನರ ಬದುಕಿಗೆ ಗಂಗಾಂಬಿಕೆ ಅವರು ಆಸರೆಯಾಗಿದ್ದಾರೆ. ಮೆದುಳು ನಿಷ್ಕ್ರಿಯಗೊಂಡ ಸುಧಾ ಮತ್ತು ಗಂಗಾಂಬಿಕೆ ಎಂಬುವವರ ಅಂಗಾಂಗಗಳ ದಾನದಿಂದಾಗಿ 10 ಜನರಿಗೆ ಬದುಕಿಗೆ ಸಹಾಯವಾಗಿದೆ.
ಮಂಡ್ಯದಲ್ಲಿ ಇತ್ತೀಚೆಗೆ ಅಂಗಾಂಗ ದಾನ: ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಯುವಕನ ಮೆದುಳು ನಿಷ್ಕ್ರಿಯಗೊಂಡಿತ್ತು. ದೇಹದ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡಿದ್ದರು. ಚಿಕ್ಕಮಂಡ್ಯ ಗ್ರಾಮದ ಜಯಮ್ಮ ಹಾಗೂ ಶ್ರೀನಿವಾಸ ದಂಪತಿಯ ಪುತ್ರ ಗಿರೀಶ್ (32) ಜೂನ್ 15ರಂದು ಮಂಡ್ಯದಲ್ಲಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ನಡೆದ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.
ಚಿಕ್ಕಮಂಡ್ಯ ರಸ್ತೆಯ ವಾಣಿಜ್ಯ ತೆರಿಗೆ ಇಲಾಖೆ ಕಚೇರಿ ಎದುರಿನ ಹಳ್ಳಕ್ಕೆ ಆಯತಪ್ಪಿ ಬಿದ್ದು ಗಿರೀಶ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ವೈದ್ಯರ ಸಲಹೆ ಅನ್ವಯ ಕುಟುಂಬಸ್ಥರು ಪುತ್ರನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದರು.
ಇದನ್ನೂ ಓದಿ: ಮೆದುಳು ನಿಷ್ಕ್ರಿಯಗೊಂಡು ಸಾವು: ಅಂಗಾಂಗದಾನ ಮಾಡಿ ಸಾರ್ಥಕತೆ ಮೆರೆದ ಶಿಕ್ಷಕಿ