ಮೈಸೂರು: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡಿ ಎಂದರೆ ವೈದ್ಯರಿಗೆ ಕೋವಿಡ್ ಬರುತ್ತದೆ ಎಂಬ ಉದ್ದಟತನದ ಉತ್ತರವನ್ನ ಆಸ್ಪತ್ರೆ ಅಧಿಕಾರಿಗಳು ನನಗೆ ನೀಡುತ್ತಾರೆ. ಹೀಗಾದರೆ ಸೋಂಕಿತರ ಪಾಡೇನು ಎಂದು ಬಿಜೆಪಿ ಶಾಸಕ ನಾಗೇಂದ್ರ ಉಸ್ತುವಾರಿ ಸಚಿವರ ಸಭೆಯಲ್ಲಿ ಗರಂ ಆದ ಪ್ರಸಂಗ ನಡೆದಿದೆ.
ಈ ಕುರಿತು ಮಾತನಾಡಿದ ಅವರು, ನಗರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಸ್ಥಳೀಯ ಶಾಸಕರಿಗೆ ಒತ್ತಡ ಜಾಸ್ತಿಯಾಗುತ್ತಿದೆ. ಈ ಬಗ್ಗೆ ಸೋಂಕಿತರಿಗೆ ಬೆಡ್ ನೀಡಿ , ಚಿಕಿತ್ಸೆ ನೀಡಿ ಎಂದು ಕೆ.ಆರ್. ಆಸ್ಪತ್ರೆಯ ಅಧಿಕಾರಿಗೆ ಕರೆ ಮಾಡಿದರೆ, ವೈದ್ಯರಿಗೆ ಕೊರೊನಾ ಬರುತ್ತದೆ ಎಂಬ ಉದ್ದಟತನದ ಉತ್ತರ ನೀಡುತ್ತಾರೆ. ವೈದ್ಯರು ವಾರ್ಡಿಗೆ ಹೋಗಿ ಚಿಕಿತ್ಸೆ ಕೊಡದಿದ್ದರೆ ಇನ್ಯಾರು ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಚಾರದಲ್ಲಿ ಇಂದು ಉಸ್ತುವಾರಿ ಸಚಿವರ ಸಭೆಯಲ್ಲಿ ಪ್ರಸ್ತಾವ ಮಾಡಿದ್ದು, ಸಮಸ್ಯೆಯನ್ನು ಬಗೆಹರಿಸುವುದಾಗಿ ಸಚಿವ ಸೋಮಶೇಖರ್ ಹೇಳಿದ್ದಾರೆ. ಜೊತೆಗೆ ಶಾಸಕರು ಕರೆ ಮಾಡಿದರೆ ಅಧಿಕಾರಿಗಳು ಪೋನ್ ಕರೆ ಸ್ವೀಕರಿಸುವುದಿಲ್ಲ. ಹಾಗೆಯೇ ಸಾಮಾನ್ಯ ಜನರಿಗೂ ಬೆಡ್ ಸಿಗುತ್ತಿಲ್ಲ. ಈ ಬಗ್ಗೆ ಇಂದಿನ ಸಭೆಯಲ್ಲಿ ವಿವರಿಸಿದ್ದಾಗಿ ಹೇಳಿದ ಬಿಜೆಪಿ ಶಾಸಕ ತಮ್ಮ ಕ್ಷೇತ್ರದ ಕೋವಿಡ್ ಸೋಂಕಿತರಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಮಾಡಿದರು.
ಓದಿ: ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಇದುವರೆಗೂ ನಾಲ್ವರ ಬಂಧನ: ಕಮಲ್ ಪಂತ್