ಮೈಸೂರು: ಹೆಚ್.ಡಿ.ಕೋಟೆ ತಾಲೂಕಿನ ಕೈಲಾಸಪುರ ಬಳಿಯ ತೋಟವೊಂದರಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ ನೇಪಾಳ ಮೂಲದ ತಾಯಿ ಮತ್ತು ಇಬ್ಬರು ಮಕ್ಕಳನ್ನು ಜೀತ ಪದ್ಧತಿ ಆರೋಪದ ಹಿನ್ನೆಲೆಯಲ್ಲಿ ರಕ್ಷಣೆ ಮಾಡಲಾಗಿದೆ. ತಹಶೀಲ್ದಾರ್ ಶ್ರೀನಿವಾಸ್, ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆಯ ರಾಮಸ್ವಾಮಿ ಹಾಗೂ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ತೋಟದಿಂದ ಮಹಿಳೆಯನ್ನು ರಕ್ಷಿಸಿ ಹೆಚ್.ಡಿ.ಕೋಟೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತರಲಾಗಿದೆ.
ಘಟನೆಯ ವಿವರ: ಸಂತ್ರಸ್ತ ಮಹಿಳೆಯನ್ನು ನಿರ್ಮಲ ಎಂದು ಗುರುತಿಸಲಾಗಿದೆ. ಕೈಲಾಸಪುರದ ವ್ಯಕ್ತಿಯೊಬ್ಬರ ಬಳಿ ಒಂದೂವರೆ ವರ್ಷದ ಹಿಂದೆ ಮಧ್ಯವರ್ತಿಯೊಬ್ಬ ನಿರ್ಮಲ ಹಾಗೂ ಆಕೆಯ ಗಂಡ ಗೋಪಾಲ್ ಅವರನ್ನು ತೋಟದ ಕೆಲಸಕ್ಕೆಂದು ಕರೆದುಕೊಂಡು ಬಂದಿದ್ದನು. ಈ ಸಂದರ್ಭದಲ್ಲಿ ತೋಟದ ಮಾಲೀಕರಿಂದ ಹಣ ಪಡೆದಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ತೋಟದಲ್ಲಿ ಕೆಲಸ ಕಡಿಮೆ ಇದ್ದುದರಿಂದ ಗೋಪಾಲನನ್ನು ಕೊಡಗು ಜಿಲ್ಲೆಗೆ ಕೆಲಸಕ್ಕೆ ಎಂದು ಕಳುಹಿಸಲಾಗಿದೆ.
ಆ ಬಳಿಕ ಇತ್ತ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ತಾಯಿ ಮತ್ತು ಮಕ್ಕಳಿಗೆ ವಿನಾಕಾರಣ ಸರಿಯಾಗಿ ಊಟ ನೀಡದೇ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಪಡೆದ ಅಧಿಕಾರಿಗಳು ಗುರುವಾರ ಸಂಜೆ ತೋಟಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಸಂತ್ರಸ್ತ ಮಹಿಳೆ ತನ್ನ ಕಷ್ಟವನ್ನು ಅಧಿಕಾರಿಗಳ ಮುಂದೆ ತೋಡಿಕೊಂಡಿದ್ದಾರೆ.
"ತಹಶೀಲ್ದಾರ್ ಶ್ರೀನಿವಾಸ್ ಮಾರ್ಗದರ್ಶನದಂತೆ ಮಹಿಳಾ ಸಾಂತ್ವನ ಕೇಂದ್ರದ ಅಧಿಕಾರಿಗಳು ಹೆಚ್.ಡಿ.ಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಂತ್ರಸ್ತರನ್ನು ರಕ್ಷಣೆ ಮಾಡಿ 24 ಗಂಟೆಗಳ ಕಾಲ ಹೆಚ್.ಡಿ.ಕೋಟೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದು, ನಂತರ ಮೈಸೂರು ಜಿಲ್ಲೆಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗುವುದು. ಮಹಿಳೆಯ ಗಂಡ ದೂರು ನೀಡಿದ ನಂತರ ಪ್ರಕರಣ ದಾಖಲು ಮಾಡಲಾಗುವುದು" ಎಂದು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ರಾಮಸ್ವಾಮಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ: ಅತಿಥಿ ಶಿಕ್ಷಕನ ಬಂಧನ