ಮೈಸೂರು: ತಾಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಪತ್ತೆಯಾದ ಎರಡು ಬೃಹತ್ ನಂದಿ ವಿಗ್ರಹಗಳನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪರಿಶೀಲನೆ ನಡೆಸಿದರು.
ಗ್ರಾಮಸ್ಥರೊಂದಿಗೆ ಮಾತನಾಡಿದ ಯದುವೀರ್, ಇಂತಹ ಅಪರೂಪದ ವಿಗ್ರಹಗಳನ್ನು ಸಂರಕ್ಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಇವುಗಳಲ್ಲಿ ಒಂದು ನಂದಿ ವಿಗ್ರಹವು 15 ಅಡಿ ಉದ್ದ ಹಾಗೂ 12 ಅಡಿ ಎತ್ತರ ಇದೆ. ಇದಕ್ಕೆ ಎದುರಾಗಿ ಗಾತ್ರದಲ್ಲಿ ಚಿಕ್ಕದಾದ ಮತ್ತೊಂದು ನಂದಿ ವಿಗ್ರಹ ಅಲ್ಲಿಯೇ ಸಿಕ್ಕಿದೆ.
ಕೆಲ ದಿನಗಳಿಂದ ನಂದಿ ವಿಗ್ರಹದ ಕೊಂಬುಗಳಷ್ಟೇ ಕಾಣುತ್ತಿದ್ದವು. ಇವುಗಳನ್ನು ಗ್ರಾಮಸ್ಥರು ಜೋಡಿ ಬಸವಣ್ಣನೆಂದು ನಂಬಿಕೆಯಿಂದ ಪೂಜೆ ಮಾಡುತ್ತಿದ್ದರು. ನಂದಿ ವಿಗ್ರಹಗಳನ್ನು ನೋಡಲೆಬೇಕು ಎಂಬ ಸಂಕಲ್ಪ ತೊಟ್ಟ ಜನರು, ಜನರಿಂದ ಹಣವನ್ನು ಸಂಗ್ರಹಿಸಿ, ತರುವಾಯ ಜೆಸಿಬಿ ಯಂತ್ರಗಳ ಮೂಲಕ ಮಣ್ಣು ತೆಗೆಸಿದ್ದಾರೆ.