ಮೈಸೂರು: ಮನೆ ಜಾಗ ಒತ್ತುವರಿ ಸಂಬಂಧ ಮಹಿಳೆಯಿಂದ ಲಂಚ ಪಡೆಯುತ್ತಿದ್ದ ಪಾಲಿಕೆ ವಲಯ ಕಚೇರಿ-7ರ ಕಿರಿಯ ಎಂಜಿನಿಯರ್ ಚಂದ್ರಶೇಖರ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ನಾಚನಹಳ್ಳಿಪಾಳ್ಯ ಗೌರಮ್ಮ ಅವರಿಗೆ ನಾಯ್ಡುನಗರ ಕೆಸರೆ- 2ನೇ ಹಂತದಲ್ಲಿ ಮನೆ ಮಂಜೂರಾಗಿದ್ದು, ಅದನ್ನು ಪುತ್ರಿ ಆಶಾ ಅವರಿಗೆ ದಾನವಾಗಿ ಕೊಟ್ಟಿದ್ದರು. ಆ ಮನೆಯನ್ನು ಕೆಡವಿ ಹೊಸದಾಗಿ ಮನೆ ನಿರ್ಮಾಣ ಮಾಡಿಕೊಂಡಿದ್ದು, ಪಕ್ಕದ ಮನೆಯ ಬಚ್ಚಲು ಮನೆಯಿಂದ ಹೊಗೆ ಬರುವ ವಿಚಾರವಾಗಿ ಆಶಾ ಅವರು ಪಾಲಿಕೆ ವಲಯ-7ರ ಆಯುಕ್ತರಿಗೆ ದೂರು ನೀಡಿದ್ದರು.
ಫೆ.7ರಂದು ಜೆಇ ಚಂದ್ರಶೇಖರ್ ಅವರು ಮನೆ ಬಳಿ ಬಂದು ಪರಿಶೀಲನೆ ನಡೆಸಿ, ಗೌರಮ್ಮ ಅವರಿಗೆ ಹೆಚ್ಚುವರಿ ಜಾಗ ಒತ್ತುವರಿ ಮಾಡಿಕೊಂಡಿದ್ದೀರಿ. 11 ಸಾವಿರ ರೂ. ಲಂಚ ನೀಡಬೇಕು. ಇಲ್ಲದಿದ್ದರೆ ಕಾಂಪೌಂಡ್ ತೆರವುಗೊಳಿಸುವುದಾಗಿ ಸೂಚಿಸಿದ್ದರು. 5 ಸಾವಿರ ರೂ. ಪಡೆದಿದ್ದರು. ಫೆ.9ರಂದು ಭೇಟಿಯಾದಾಗ ಮತ್ತೆ 5 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಭೂಮಿ ಕೊಡಿಸುವುದಾಗಿ ಕರೆಸಿ, ಹಣ ದೋಚಿದ್ದ ಆರೋಪಿಯ ಬಂಧನ
ಈ ಸಂಬಂಧ ಗೌರಮ್ಮ ಅವರು ಗುರುವಾರ ಬೆಳಗ್ಗೆ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗೌರಮ್ಮ ಅವರಿಂದ 5 ಸಾವಿರ ರೂ. ಸ್ವೀಕರಿಸುವಾಗ ಎಸಿಬಿ ಪೊಲೀಸರು ದಾಳಿ ಮಾಡಿ ಹಣಸಮೇತ ಚಂದ್ರಶೇಖರ್ ಅವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಎಸಿಬಿ ದಕ್ಷಿಣ ವಲಯ ಎಸ್ಪಿ ಅರುಣಾಂಗ್ಶು ಗಿರಿ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಎಚ್. ಪರಶುರಾಮಪ್ಪ, ಇನ್ಸ್‌ಪೆಕ್ಟರ್‌ಗಳಾದ ಎ.ಕರೀಂ ರಾವತರ್, ಕೆ.ಎಸ್.ನಿರಂಜನ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.