ಮೈಸೂರು: 2019ರಲ್ಲಿ ಅರಮನೆ ನಗರಿಯಲ್ಲಿ ಜರುಗಿದ ಪ್ರಮುಖ ಘಟನಾವಳಿಗಳ ಕುರಿತ ಸಂಕ್ಷಿಪ್ತ ಮಾಹಿತಿಯ ಹಿನ್ನೋಟ ಇಲ್ಲಿದೆ.
ಜನವರಿ ತಿಂಗಳಿನಲ್ಲಿ ಬಹುರೂಪಿ ನಾಟಕೋತ್ಸವ, ರೈತರ ಸುಗ್ಗಿ ಹಬ್ಬ, ಸಂಕ್ರಾಂತಿ ಸಂಭ್ರಮ ಮತ್ತು ಗಣರಾಜ್ಯೋತ್ಸವ ಸೇರಿದಂತೆ ಹಲವು ಘಟನಾವಳಿಗಳು ಜರುಗಿದ್ದವು.
ಫೆಬ್ರವರಿ ತಿಂಗಳಿನಲ್ಲಿ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಗೆ ಅಂದಿನ ಸಿ.ಎಂ ಕುಮಾರಸ್ವಾಮಿ ಭೇಟಿ, ಮೇಯರ್ ಚುನಾವಣೆ, ಸರ್ಕಾರಿ ಶಾಲೆಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮಕ್ಕಳಿಗೆ ಪಾಠ ಮಾಡಿದ್ದು ವಿಶೇಷವಾಗಿತ್ತು.
ಮಾರ್ಚ್ ತಿಂಗಳಿನಲ್ಲಿ ರಾಜ್ಯ ಪತ್ರಿಕಾ ಸಮ್ಮೇಳನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪನವರು ಸುತ್ತೂರಿನ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮೈಸೂರು ವಿಶ್ವವಿದ್ಯಾನಿಲಯದ 99ನೇ ಘಟಕೋತ್ಸವ ಇದೇ ಅವಧಿಯಲ್ಲಿ ನಡೆಯಿತು.
ಏಪ್ರಿಲ್ನಲ್ಲಿ ಲೋಕಸಭಾ ಚುನಾವಣೆ ಕಾವು, ಇಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಮಾಡಿದ್ದು ವಿಶೇಷವಾಗಿತ್ತು. ಇನ್ನು ಕೇರಳದ ಚರ್ಚ್ ಮೇಲಿನ ದಾಳಿಯಿಂದ ಮೈಸೂರಿನ ಚರ್ಚ್ ಗಳಿಗೆ ಬಿಗಿ ಬಂದುಬಸ್ತ್ ಏರ್ಪಡಿಸಲಾಗಿತ್ತು.
ಮೇ ತಿಂಗಳಿನಲ್ಲಿ ಎಂ.ಪಿ ಚುನಾವಣೆ ಫಲಿತಾಂಶ, ಮಾವು ಮೇಳ ಹಾಗೂ ಪಾರಂಪರಿಕ ಮೈಸೂರು ರೈಲ್ವೆ ನಿಲ್ದಾಣದಲ್ಲಿ ನೂತನ ಕಾಮಗಾರಿಗಳ ಜೊತೆ ರೈಲ್ವೆ ನಿಲ್ದಾಣದ ವೀಕ್ಷಣೆ ನಡೆಯಿತು. ಜೂನ್ ತಿಂಗಳಿನಲ್ಲಿ ಯೋಗಾ ಡೇ ಹಾಗೂ ಮೈಸೂರು ವಿಮಾನ ನಿಲ್ದಾಣದಿಂದ ಹೊಸ ವಿಮಾನ ಹಾರಾಟ ನಡೆಸಿದ್ದು ಸ್ಮರಣೀಯ.
ಜುಲೈನಲ್ಲಿ ಆಷಾಢ ಮಾಸದ ಚಾಮುಂಡಿ ಉತ್ಸವ ನಿಮಿತ್ತ, ನಗರಕ್ಕೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿ ನೀಡಿದ್ದರು. ಆಗಸ್ಟ್ನಲ್ಲಿ ನಂಜನಗೂಡು ಮತ್ತು ಹೆಚ್.ಡಿ ಕೋಟೆ ತಾಲೂಕಿನ ಸರಗೂರು ಪ್ರದೇಶದಲ್ಲಿ ಉಂಟಾಗಿದ್ದ ಪ್ರವಾಹದಿಂದ ಈ ಭಾಗದ ಜನರು ತತ್ತರಿಸಿದ್ದರು. ದೇವರಾಜ ಮಾರುಕಟ್ಟೆಗೆ ಬೆಂಕಿ ಬಿದ್ದಿತ್ತು. ಚತುರ್ಮಾಸ ಆಚರಣೆಗೆಂದು ಮೈಸೂರಿಗೆ ಪೇಜಾವರ ಶ್ರೀಗಳು ಆಗಮಿಸಿದ್ದರು.
ಸೆಪ್ಟಂಬರ್ ತಿಂಗಳ ಕೊನೆಯಲ್ಲಿ ನಾಡಹಬ್ಬ ದಸರಾಗೆ ಚಾಲನೆ, ಗಜಪಡೆ ಆಗಮನ. ಅಕ್ಟೋಬರ್ ಮೊದಲ ವಾರ ನಾಡಹಬ್ಬ, ಚಿನ್ನದ ಅಂಬಾರಿಗೆ ಸಿ.ಎಂ ಯಡಿಯೂರಪ್ಪ ಪುಷ್ಪಾರ್ಚನೆ, ಜಯಚಾಮರಾಜೇಂದ್ರ ಒಡೆಯರ್ ಜಯಂತಿಗೆ ಅರಮನೆಗೆ ರಾಷ್ಟ್ರಪತಿ ಆಗಮನ ಸೇರಿದಂತೆ ಪ್ರಮುಖ ಘಟನಾವಳಿಗಳು ಅಕ್ಟೋಬರ್ ನಲ್ಲಿ ಕಂಡುಬಂದವು.
ಇನ್ನು ನವೆಂಬರ್ನಲ್ಲಿ ಮೈಸೂರು ಬಿಷಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು ಬಾರಿ ಚರ್ಚೆಗೆ ಗ್ರಾಸವಾಗಿತ್ತು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಕಾರ್ಯಕ್ರಮವೊಂದರಲ್ಲಿ ಯುವಕನೋರ್ವ ಮಚ್ಚು ಬೀಸಿದ್ದ ಪ್ರಕರಣ ನಗರವನ್ನು ಬೆಚ್ಚಿಬೀಳಿಸಿತ್ತು.
ಈ ಡಿಸೆಂಬರ್ ತಿಂಗಳಿನಲ್ಲಿ ಮಾಗಿ ಉತ್ಸವ ನಡೆದಿದ್ದು, ನಗರದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿಯಿತು.