ಮೈಸೂರು:ಪೊಲೀಸ್ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಎಂತಹ ಘಟನೆಗಳಿಗೂ ಎದೆಗುಂದದೆ ಇಂದು ಹಲವಾರು ಪೊಲೀಸರು ವೀರ ಮರಣ ಹೊಂದಿದ್ದಾರೆ. ಇಂತಹ ಹುತಾತ್ಮರು ನಮಗೆಲ್ಲಾ ಪ್ರೇರಣೆಯಾಗಬೇಕು ಎಂದು ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಹೇಳಿದರು.
ನಗರದ ಪೊಲೀಸ್ ಹುತಾತ್ಮರ ಉದ್ಯಾನವನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹುತಾತ್ಮರಾದವರನ್ನು ನಾವು ಒಂದು ದಿನಕ್ಕೆ ಮಾತ್ರ ನೆನಪಿಸಿಕೊಳ್ಳಬಾರದು. ಅವರ ಕಾರ್ಯ ವೈಖರಿ ಹಾಗೂ ವೀರ ಮರಣಕ್ಕೆ ನಿಜವಾದ ಗೌರವ ಅರ್ಪಿಸಲು ನಾವು ಪ್ರತಿ ದಿನ, ಪ್ರತಿ ಘಳಿಗೆಯೂ ಅವರನ್ನು ಸ್ಮರಿಸಬೇಕು. ಅದೇ ನಾವು ಅವರಿಗೆ ನೀಡುವ ಗೌರವ.
ಪ್ರತಿ ವರ್ಷದಂತೆ ಅಕ್ಟೋಬರ್ 21 ರಂದು ಸೇವೆಯಲ್ಲಿದ್ದು, ನಿಧನರಾದ ಪೊಲೀಸ್ ಅಧಿಕಾರಿಗಳಿಗೆ ಹುತಾತ್ಮರ ದಿನವನ್ನಾಗಿ ಆಚರಿಸುತ್ತಿದ್ದು, 2018ರ ಸೆಪ್ಟೆಂಬರ್‌ರಿಂದ 2019 ರ ಅಗಸ್ಟ್ ವರೆಗೆ ಕರ್ನಾಟಕದ 12 ಮಂದಿ ಸೇರಿ ದೇಶದ ಒಟ್ಟು 292 ಪೊಲೀಸ್ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇವರೆಲ್ಲರೂ ಜನರ ಸೇವೆಗಾಗಿ ಪ್ರಾಣ ತೆತ್ತವರು ಎಂದು ಸ್ಮರಿಸಿ, ಹುತಾತ್ಮರ ಸ್ಮಾರಕಕ್ಕೆ ವಿವಿಧ ಇಲಾಖೆಯ ಕರ್ತವ್ಯ ನಿರತ ಅಧಿಕಾರಿಗಳು ಹೂ ಗುಚ್ಛ ಇಡುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ವಿಪುಲ್ ಕುಮಾರ್, ನಗರ ಪೊಲೀಸ್ ಆಯುಕ್ತರಾದ ಕೆ.ಟಿ ಬಾಲಕೃಷ್ಣ, ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.