ಮೈಸೂರು: ಕೊರೊನಾ ಅಬ್ಬರದ ನಡುವೆ ಸರಳ ದಸರಾ ಆಚರಣೆ ಮಾಡಲು ಮುಂದಾಗುತ್ತಿರುವ ರಾಜ್ಯ ಸರ್ಕಾರ ಕೂಡಲೇ ಈ ನಿರ್ಧಾರ ಕೈ ಬಿಡಬೇಕು ಎಂದು ಒತ್ತಾಯಿಸಿ ಮೈಸೂರು ಕನ್ನಡ ವೇದಿಕೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರಳ ಆಚರಣೆ ಮಾಡಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಿಸಲು ಸರ್ಕಾರ ಹೊರಟಿದೆ ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂಬಂತೆ ಈ ಬಾರಿಯ ಸರಳ ದಸರಾಗೂ ರಾಜ್ಯ ಸರ್ಕಾರ 15 ಕೋಟಿ ರೂ. ಘೋಷಣೆ ಮಾಡಿದೆ.
ಈ ವೆಚ್ಚವನ್ನು ದಸರಾಗೆ ವಿನಿಯೋಗಿಸುವ ಬದಲು ಕೊರೊನಾ ಆಸ್ಪತ್ರೆಗಳನ್ನು ವಿಸ್ತರಣೆ ಮಾಡಿ ರೋಗಿಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ದಸರಾ ದೀಪಾಲಂಕಾರ ಮಾಡದೆ ಅರಮನೆ ಆವರಣದಲ್ಲಿ ಸಾಂಪ್ರದಾಯಿಕ ಸರಳ ದಸರಾ ಆಚರಿಸಬೇಕು ಎಂದು ಆಗ್ರಹಿಸಿದ್ದಾರೆ.