ಮೈಸೂರು: ಸೇನಾ ಹಾಗೂ ಅರೆಸೇನಾ ಪಡೆಗಳ ಆಂತರಿಕ ಸಂಘರ್ಷ ಹಿಂಸಾರೂಪ ತಾಳಿದ್ದು, ಸುಡಾನ್ ದೇಶದಲ್ಲಿ ಜನರು ಭಯದಲ್ಲಿ ಬದುಕುವಂತಾಗಿದೆ. ಮೈಸೂರು ಮೂಲದ ಜನರು ಸುಡಾನ್ ದೇಶದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಇದ್ದರೆ ತಿಳಿಸುವಂತೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 0821-2423800, 1077 ಗೆ ಸಂಪರ್ಕಿಸಿ ಮಾಹಿತಿ ಒದಗಿಸುವಂತೆ ಮನವಿ ಮಾಡಿದ್ದಾರೆ.
ಟೈಗರ್ ಬ್ಲಾಕ್‌ನ ಹಾಡಿಯ 108 ಹಕ್ಕಿ ಪಿಕ್ಕಿ ಜನಾಂಗ: ವಾರದಿಂದ ಸುಡಾನ್ ದೇಶದಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವೆ ನಡೆದ ಅಂತರಿಕ ಸಂಘರ್ಷದಲ್ಲಿ, ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ ಮತ್ತು ಶಂಕರಪುರ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಟೈಗರ್ ಬ್ಲಾಕ್ ಹಾಡಿಯ 108 ಹಕ್ಕಿ-ಪಿಕ್ಕಿ ಜನಾಂಗದವರು ಸಿಲುಕಿರುವ ಶಂಕೆ ಇದೆ. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರಲು ಭಾರತ ಸರ್ಕಾರ ನಿರಂತರ ಶ್ರಮ ವಹಿಸುತ್ತಿದೆ.
ಮೈಸೂರು ಜಿಲ್ಲೆಯವರು ಸುಡಾನ್ ದೇಶದಲ್ಲಿ ಸಿಲುಕಿದ್ದರೆ ಅವರ ಮೊಬೈಲ್ ನಂಬರ್, ಪಾಸ್ ಪೋರ್ಟ್ ಸೇರಿದಂತೆ ಇತರ ದಾಖಲಾತಿಗಳ ವಿವರವನ್ನು ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿಗೆ ಕರೆ ಮಾಡಿ ನೀಡಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಕರ್ನಾಟಕದ 31 ಮಂದಿ ಸಿಲುಕಿರುವ ಮಾಹಿತಿ: ಸುಡಾನ್ ದೇಶದ ಅಲ್ಫಷೀರ್ ನಗರದಲ್ಲಿ ಕರ್ನಾಟಕದ 31 ಮಂದಿ ಸಿಲುಕಿಕೊಂಡಿದ್ದು, ಫೋಟೋ, ವಿಡಿಯೋ ಕಳಿಸುವ ಮೂಲಕ ತಮ್ಮನ್ನು ರಕ್ಷಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಭಾರತೀಯರು ನೆಲೆಸಿರುವ ಮನೆಗಳ ಮೇಲೂ ಗುಂಡಿನ ದಾಳಿ ನಡೆದಿದೆ. ಪರಿಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಆಹಾರ, ನೀರಿಗೂ ಪರಿತಪಿಸುವಂತಾಗಿದೆ ಎಂದು ತಿಳಿಸಿದ್ದಾರೆ. ಕರ್ನಾಟಕದ 31 ಮಂದಿಯಲ್ಲಿ ಶಿವಮೊಗ್ಗದ 7, ದಾವಣಗೆರೆ ಜಿಲ್ಲೆ ಚನ್ನಗಿರಿಯ 5, ಮೈಸೂರು ಜಿಲ್ಲೆಯ ಹುಣಸೂರಿನ 19 ಜನ ಸಿಲುಕಿರುವ ಮಾಹಿತಿ ಇದೆ.
ಇವರೆಲ್ಲ ಕೂಲಿ ಕಾರ್ಮಿಕರಾಗಿದ್ದು, ಕೆಲಸ ಅರಸಿ ಸುಡಾನ್ಗೆ ತೆರಳಿದ್ದರು. ಸೇನಾ ಹಾಗೂ ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ ಆಂತರಿಕ ಸಂಘರ್ಷದಿಂದ ಮಹಿಳೆಯರು ಆತಂಕದಲ್ಲಿದ್ದಾರೆ. ಸುಡಾನ್‌ನಲ್ಲಿ ಸಿಲುಕಿರುವ 31 ಜನ ಕನ್ನಡಿಗರಲ್ಲಿ ಬಹುತೇಕರು ಗಿಡಮೂಲಿಕೆಗಳ ಔಷಧಿ ಮಾರಾಟ ಮಾಡಲು ತೆರಳಿದ್ದವರು ಎಂಬ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 7 ಮಂದಿಯೂ ಸುಡಾನ್‌ನಲ್ಲಿ ಸಿಲುಕಿದ್ದು,ಆಫ್ರಿಕಾದ ಸುಡಾನ್ ದೇಶದ ಅಲ್ಪಷೇರ್ ಸಿಟಿಯಲ್ಲಿ ಉಳಿದುಕೊಂಡಿದ್ದೇವೆ. ನಾವಿರುವ ಮನೆಯ ಸುತ್ತ ಗುಂಡಿನ ದಾಳಿ ಆಗ್ತಾ ಇದೆ. ಬಾಂಬ್ ಸದ್ದು ಕೂಡ ಕೇಳಿ ಬರುತ್ತಿದೆ. ಏರ್ಪೋರ್ಟ್ ನಾಶವಾಗಿವೆ. ದೊಡ್ಡ ದೊಡ್ಡ ಸಿಟಿಗಳು ನಾಶವಾಗಿವೆ. ಊಟ, ತಿಂಡಿ, ಕುಡಿಯುವ ನೀರೂ ಸಹ ಇಲ್ಲವಾಗಿದೆ ಎಂದು ವಿಡಿಯೋದಲ್ಲಿ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.
ಇದನ್ನೂಓದಿ: ಕೋಳಿಗಳನ್ನು ಬೆನ್ನಟ್ಟಿ ಬಾವಿಗೆ ಬಿದ್ದ ಕರಡಿ; ಮೇಲಕ್ಕೆತ್ತಿದರೂ ಬದುಕಲಿಲ್ಲ- ವಿಡಿಯೋ