ಮೈಸೂರು: ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅವಧಿಗೂ ಮುನ್ನಾ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ನಿರ್ಗಮಿತ ಡಿಸಿ ಬಿ. ಶರತ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಕೇಂದ್ರ ಆಡಳಿತ ಮಂಡಳಿ(ಸಿಎಟಿ) ವಿಚಾರಣೆ ನಡೆಸಿತು.
ಕೊರೊನಾ ಹಿನ್ನೆಲೆಯಲ್ಲಿ ಸಿಎಟಿಯು ಆನ್‌ಲೈನ್ ಮೂಲಕ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ತಾಂತ್ರಿಕ ಸಮಸ್ಯೆ ಎದುರಾದ ಹಿನ್ನೆಲೆ ವಿಚಾರಣೆಯನ್ನು ಅ.16 ಕ್ಕೆ ಮುಂಡೂಡಲಾಯಿತು. ಜೊತೆಗೆ ಎರಡು ಕಡೆಯ ವಕೀಲರಿಗೆ ಖುದ್ದು ಅ. 16 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ: ಬಿ.ಶರತ್ ಅವರನ್ನು ರಾಜ್ಯ ಸರ್ಕಾರ ಆಗಸ್ಟ್ 29 ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿತ್ತು. ನಂತರ ಸೆಪ್ಟೆಂಬರ್ 29 ರಂದು ದಸರಾ ಮಹೋತ್ಸವದ ಪೂರ್ವ ಸಿದ್ಧತಾ ಕಾರ್ಯಗಳ ನಡೆವೆಯೂ ದಿಢೀರ್ ವರ್ಗಾವಣೆ ಮಾಡಿ, ರೋಹಿಣಿ ಸಿಂಧೂರಿ ಅವರನ್ನು ಸೆಪ್ಟೆಂಬರ್ 29 ರಂದು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿತು.
ಐಎಎಸ್ ಅಧಿಕಾರಿ ಬಿ.ಶರತ್ ಅವರು, 30 ದಿನಕ್ಕೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿ ಕೇಂದ್ರ ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದರು. ಅ.07 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆಯನ್ನು ಅ. 14ಕ್ಕೆ ಮುಂದೂಡಿತ್ತು. ಆದರೆ ಇಂದು ವಿಡಿಯೋ ಕಾನ್ಫರೆನ್ಸ್ ವೇಳೆ ತಾಂತ್ರಿಕ ದೋಷ ಎದುರಾದ ಕಾರಣ ವಿಚಾರಣೆಯನ್ನು ಮತ್ತೆ ಅ.16ಕ್ಕೆ ಮುಂದೂಡಲಾಗಿದೆ.