ಮೈಸೂರು: ಕೊರೊನಾ ಹೆಚ್ಚಾಗುತ್ತಿರುವ 8 ಜಿಲ್ಲೆಗಳಲ್ಲಿ ಮೈಸೂರು ಸಹ ಒಂದಾಗಿದ್ದು, ಕೇರಳ, ಮಹಾರಾಷ್ಟ್ರ, ಪಂಜಾಬ್, ಚಂಡಿಗಢನಿಂದ ಕರ್ನಾಟಕಕ್ಕೆ ಆಗಮಿಸುವ ಜನರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲು ಸರ್ಕಾರ 2021ರ ಮಾರ್ಚ್ 22ರಂದು ಸೋಮವಾರ ಸುತ್ತೋಲೆ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಕೋವಿಡ್-19 ಹರಡುವಿಕೆಯನ್ನು ತಡೆಯುವಿಕೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಮಾರ್ಗಸೂಚಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಕೇರಳ ಗಡಿಭಾಗದಲ್ಲಿ ಹೆಚ್ಚಿನ ನಿಗಾವಹಿಸುವಂತೆ ತಿಳಿಸಿದರು. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಪಂಜಾಬ್ ಮತ್ತು ಚಂಡಿಗಢ ರಾಜ್ಯದಲ್ಲೂ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ರಾಜ್ಯಗಳಿಂದ ಬರುವವರು 72 ಗಂಟೆಯ ಈಚೆಗೆ ಪಡೆದ ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗಿಟಿವ್ ಇರುವ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು ಎಂದಿದ್ದಾರೆ.
ಇದನ್ನೂ ಓದಿ: ಕೋರ್ಟ್ನಿಂದ ತಡೆಯಾಜ್ಞೆ ತಂದಿರುವ ಆರು ಸಚಿವರು ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಆಗ್ರಹ
ಎಲ್ಲರಿಗೂ ನಿಯಮ ಅನ್ವಯ
ಈ ರಾಜ್ಯಗಳಿಂದ ವಿಮಾನ, ಬಸ್, ರೈಲು, ವೈಯಕ್ತಿಕ ವಾಹನಗಳಲ್ಲಿ ಬರುವ ಎಲ್ಲರಿಗೂ ನಿಯಮ ಅನ್ವಯವಾಗುತ್ತದೆ. 72 ಗಂಟೆಯಿಂದ ಈಚೆಗೆ ಪಡೆದ ಆರ್ಟಿಪಿಸಿಆರ್ ನೆಗಿಟಿವ್ ಪ್ರಮಾಣಪತ್ರ ತರುವ ಪ್ರಯಾಣಿಕರಿಗೆ ಮಾತ್ರ ವಿಮಾನಯಾನ ಸಂಸ್ಥೆಯವರು ಬೋರ್ಡಿಂಗ್ ಪಾಸ್ ನೀಡಬೇಕು ಎಂದರು.
ಆರ್ಟಿಪಿಸಿಆರ್ ನೆಗಿಟಿವ್ ಪತ್ರ ಕಡ್ಡಾಯ
ರೈಲುಗಳ ಮೂಲಕ ಬರುವ ಎಲ್ಲಾ ಪ್ರಯಾಣಿಕರು ಆರ್ಟಿಪಿಸಿಆರ್ ನೆಗಿಟಿವ್ ಪತ್ರ ತಂದಿರುವುದನ್ನು ರೈಲ್ವೇ ಅಧಿಕಾರಿಗಳು ಖಾತರಿಪಡಿಸಿಕೊಳ್ಳಬೇಕು. ಬಸ್‍ನಲ್ಲಿ ಬರುವ ಪ್ರಯಾಣಿಕರ ನೆಗಿಟಿವ್ ವರದಿಯನ್ನು ಬಸ್ ನಿರ್ವಾಹಕರು ಖಾತರಿಪಡಿಸಿಕೊಳ್ಳಬೇಕು ಎಂದರು. ಕೆಲವರಿಗೆ ಆರ್ಟಿಪಿಸಿಆರ್ ನೆಗಿಟಿವ್ ಪತ್ರ ಹಾಜರುಪಡಿಸುವಿಕೆಯಿಂದ ವಿನಾಯಿತಿ ನೀಡಲಾಗಿದೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ಗಣ್ಯರು, ಆರೋಗ್ಯ ಕಾರ್ಯಕರ್ತರು, 2 ವರ್ಷದೊಳಗಿನ ಮಕ್ಕಳು, ಕುಟುಂಬದಲ್ಲಿ ಸಾವು ಸಂಭವಿಸಿದ್ದರೆ, ವೈದ್ಯಕೀಯ ಚಿಕಿತ್ಸೆ ಮುಂತಾದ ತುರ್ತು ಪರಿಸ್ಥಿತಿಯಲ್ಲಿ ಇರುವವರಿಗೆ ವಿನಾಯಿತಿ ನೀಡಲಾಗಿದೆ ಎಂದರು. ಆದರೆ ಗಡಿ ಪ್ರವೇಶಿಸುವಾಗ ಸ್ವಾಬ್ ಮಾದರಿ ಸಂಗ್ರಹಿಸಿಕೊಂಡು, ಅವರ ವಿಳಾಸ, ಗುರುತಿನ ಚೀಟಿ, ಫೋನ್ ನಂಬರ್ ಮುಂತಾದ ಮಾಹಿತಿ ಪರಿಶೀಲಿಸಿ, ದಾಖಲಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ತಕ್ಷಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ 2021ರ ಫೆಬ್ರವರಿ 16 ಮತ್ತು 20 ರಂದು ಹೊರಡಿಸಿದ ಮಾರ್ಗಸೂಚಿಗಳೇ ಅನ್ವಯವಾಗಲಿವೆ. ರಾಜ್ಯ ಸರ್ಕಾರ ಹೊರಡಿಸಿದ ಹೊಸ ಮಾರ್ಗಸೂಚಿಗಳು ಮಾರ್ಚ್ 25ರ ಬೆಳಿಗ್ಗೆ 6ಗಂಟೆಯಿಂದ ಜಾರಿಗೆ ಬರಲಿವೆ ಎಂದು ಹೇಳಿದರು. ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಚೆಕ್ಪೋಸ್ಟ್ಗಳಿಂದ ಜಾಗದಲ್ಲಿ ಪುನಃ ನಿರ್ಮಾಣಗೊಳಿಸಿ ಎಂದಿರುವ ಅವರು, ಜನರು ಗುಂಪಾಗಿ ಸೇರದಂತೆ ನೋಡಿಕೊಳ್ಳಿ ಹಾಗೂ ಕಾರ್ಯಕ್ರಮಗಳನ್ನು ಮುಂದೂಡಲು ಹೇಳಿ ಎಂದು ತಿಳಿಸಿದರು.
5 ಸಾವಿರ ಕೋವಿಡ್ ಪರೀಕ್ಷೆ
ಪ್ರತಿಯೊಂದು ತಾಲ್ಲೂಕಿನಲ್ಲಿ ಪ್ರತಿದಿನ ಕಡ್ಡಾಯವಾಗಿ 5,000 ಕೋವಿಡ್ ಪರೀಕ್ಷೆ ಮಾಡಬೇಕು. ಜನಸಂದಣಿ ಸೇರುವ ಕಡೆ, ಬಸ್ ನಿಲ್ದಾಣಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ಚೆಕ್‌ಪೋಸ್ಟ್‌ಗಳಲ್ಲಿ ದೇವಸ್ಥಾನಗಳಲ್ಲಿ ಹಾಗೂ ಶಾಲಾ-ಕಾಲೇಜುಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಿದರು.