ಮೈಸೂರು:ನಾಡಿನ ಸಾಂಸ್ಕೃತಿಕ ಸಂಕೇತವಾದ ಮೈಸೂರು ದಸರಾಕ್ಕೆ ವಿದ್ಯುಕ್ತ ಚಾಲನೆ ದೊರಕಿದ್ದು, ಅರಮನೆ ನಗರಿಯಲ್ಲಿ ಸಂಭ್ರಮ ಮನೆ ಮಾಡಿದೆ. ಚಾಮುಂಡಿಬೆಟ್ಟದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜಕೀಯ ಮುತ್ಸದ್ಧಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಚಾಮುಂಡೇಶ್ವರಿಗೆ ಅಗ್ರಪೂಜೆ ಸಲ್ಲಿಸಿ ದಸರಾಕ್ಕೆ ಚಾಲನೆ ನೀಡಿದ್ದಾರೆ.
ಈ ನಡುವೆ ರಾಜವಂಶಸ್ಥರ ಖಾಸಗಿ ದಸರಾಕ್ಕೂ ಚಾಲನೆ ದೊರಕಿದ್ದು, ಯದುವೀರ ಒಡೆಯರ್ 7ನೇ ಬಾರಿಗೆ ಸಿಂಹಾಸನ ಏರಿ ದರ್ಬಾರ್ ಆರಂಭಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಡಗರ ಸಂಭ್ರಮ ಮನೆ ಮಾಡಿದ್ದು, 411ನೇ ದಸರಾ ಮಹೋತ್ಸವಕ್ಕೆ ಚಾಲನೆ ದೊರಕಿದೆ. ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ 8.15ರಿಂದ 8.45ರ ಶುಭ ಲಗ್ನದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಉದ್ಘಾಟನೆ ನೆರವೇರಿಸಿದ್ದಾರೆ.
ಗಣ್ಯರಿಂದ ಪುಷ್ಪಾರ್ಚನೆ
ಬೆಳ್ಳಿ ರಥದಲ್ಲಿ ಅಲಂಕೃತವಾದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖರ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವುದರೊಂದಿಗೆ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಇದಕ್ಕೂ ಮುನ್ನ ನಿಗದಿತ ಸಮಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮುಂಡಿಬೆಟ್ಟಕ್ಕೆ ಆಗಮಿಸಿ ಎಸ್.ಎಂ.ಕೃಷ್ಣ ಅವರನ್ನು ಬರ ಮಾಡಿಕೊಂಡರು. ಪೂರ್ಣಕುಂಭದೊಂದಿಗೆ ದೇವಸ್ಥಾನಕ್ಕೆ ತೆರಳಿ ಶೈಲಪುತ್ರಳಾಗಿ ಅಲಂಕೃತಗೊಂಡಿದ್ದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಹಳೆಯ ನೆನಪುಗಳ ಬುತ್ತಿ ಬಿಚ್ಚಿಟ್ಟ ಮಾಜಿ ಸಿಎಂ
ನಂತರದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯದ ಮೈಸೂರಿನ ಒಡನಾಟ, ಮಹಾರಾಜರ ಕಾಲದ ದಸರಾ ಆಚರಣೆ, ಪ್ರಜಾಪ್ರತಿನಿಧಿ ಸಭೆ ಸದಸ್ಯರಾಗಿದ್ದ ತಮ್ಮ ತಂದೆಯ ನೆನಪುಗಳನ್ನು ಮೆಲುಕು ಹಾಕಿದರು. ಮೈಸೂರು ದಸರಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಪ್ಯಾಕೇಜ್ ಮಾಡುವಂತೆ ಸಲಹೆ ನೀಡಿದರು.
ದೇವರೇ ಕೊರೊನಾ ಸಂಕಷ್ಟ ಪರಿಹರಿಸಿ
ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನಾಡಿಗೆ ಎದುರಾಗಿರುವ ಕೊರೊನಾ ಸಂಕಷ್ಟವನ್ನು ನಿವಾರಿಸುವಂತೆ ಪ್ರಾರ್ಥಿಸಿದರು. ದೇವರು ಎಂಥ ಕಷ್ಟ ಕೊಡುವುದಾದರೂ ನನಗೆ ಕೊಡಲಿ ಎನ್ನುವ ಮೂಲಕ ಭಾವುಕರಾಗಿ ಭಾಷಣ ಮಾಡಿದರು. ತಮ್ಮ ಅಧಿಕಾರದ ಅವಧಿಯಲ್ಲಿ ಸ್ವಚ್ಛ ಮತ್ತು ಜನಪರ ಆಡಳಿತ ನೀಡುವುದಾಗಿ ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿದರು.
ಅತ್ತ ಚಾಮುಂಡಿಬೆಟ್ಟದಲ್ಲಿ ಗಣ್ಯರಿಂದ ಸರ್ಕಾರಿ ದಸರಾಕ್ಕೆ ಚಾಲನೆ ದೊರೆತರೆ, ಇತ್ತ ಮೈಸೂರು ಅರಮನೆಯಲ್ಲಿ ಖಾಸಗಿ ದಸರಾಕ್ಕೆ ರಾಜವಂಶಸ್ಥರಿಂದ ಚಾಲನೆ ದೊರೆಯಿತು. ಮುಂಜಾನೆಯೇ ಚಾಮುಂಡಿ ತೊಟ್ಟಿಯಲ್ಲಿ ಕಂಕಣಧಾರಣೆ ಮಾಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸುಮಾರು 11 ಗಂಟೆ ಸುಮಾರಿಗೆ ರಾಜಪೋಷಾಕು ಧರಿಸಿ ಅರಮನೆ ದರ್ಬಾರ್ ಹಾಲ್‌ಗೆ ಆಗಮಿಸಿದರು.
ನವಗ್ರಹ ಪೂಜೆ ಮಾಡಿ ಸಿಂಹಾಸನಾರೋಹಣರಾಗಿ ದರ್ಬಾರ್ ನಡೆಸಿದರು. ಈ ವೇಳೆ ವಂದಿ ಮಾಗದರಿಂದ ಬಹುಪರಾಕ್ ಘೋಷಣೆಗಳು ಮೊಳಗಿದವು. ಇದೇ ವೇಳೆ ಕೋಟೆ ಸೋಮೇಶ್ವರ ದೇವಸ್ಥಾನದಿಂದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸುಗಳೊಂದಿಗೆ ಕಲಶ ಪ್ರತಿಷ್ಠಾಪನೆ ಮಾಡಲಾಯ್ತು.