ಮೈಸೂರು: ಇನ್ನು ಕೆಲವೇ ದಿನಗಳಲ್ಲಿ ಹೊಸ ವರ್ಷ ಬರಲಿದೆ. ಈ ಹಿನ್ನೆಲೆ ನಗರದಲ್ಲಿ ಡಿಜೆಗೆ ಅವಕಾಶವಿಲ್ಲ. ರಾಜ್ಯ ಸರ್ಕಾರದಿಂದ ಬರುವ ಮಾರ್ಗಸೂಚಿಯ ಅನುಸಾರ ನಿರ್ಬಂಧ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಹೇಳಿಕೆ ನೀಡಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಗರದಲ್ಲಿ ಹೊಸ ವರ್ಷಾಚರಣೆಗೆ ಸಂಬಂಧಿಸಿದಂತೆ ಡಿಜೆಗೆ ಅವಕಾಶವಿಲ್ಲ. ರಾತ್ರಿ 1 ಗಂಟೆಯವರೆಗೆ ಪಾರ್ಟಿ ಅವಧಿಯನ್ನು ವಿಸ್ತರಿಸುವಂತೆ ಮನವಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ನಾವು ಈಗಾಗಲೇ ಒಂದಿಷ್ಟು ಮಾರ್ಗಸೂಚಿಗಳನ್ನು ಸಿದ್ಧಮಾಡಿ ಇಟ್ಟುಕೊಂಡಿದ್ದೇವೆ. ಆದರೆ, ರಾಜ್ಯ ಸರ್ಕಾರದಿಂದ ಕೆಲವೊಂದು ಮಾರ್ಗಸೂಚಿ ನಿರೀಕ್ಷೆ ಇದ್ದು, ಸರ್ಕಾರ ಹೊರಡಿಸುವ ಮಾರ್ಗಸೂಚಿ ಅನುಸಾರ ನಿರ್ಬಂಧಗಳನ್ನು ಕೈಗೊಳ್ಳುತ್ತೇವೆ. ಸರ್ಕಾರದಿಂದ ಒಂದೆರಡು ದಿನಗಳಲ್ಲಿ ಈ ಬಗ್ಗೆ ಮಾಹಿತಿ ಬರುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೌಡಿ ಶೀಟರ್ ಅಲ್ಲ: ಮೈಸೂರು ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಕಿರಣ್ ಗೌಡ ಎಂಬ ವ್ಯಕ್ತಿಯ ಹೆಸರು ರೌಡಿ ಶೀಟರ್ನಲ್ಲಿ ಇಲ್ಲ. ಆದರೆ, ಅವರ ಮೇಲೆ ನಾಲ್ಕೈದು ಕೇಸ್ಗಳು ದಾಖಲಾಗಿವೆ. ಆ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಕಿರಣ್ ಮೇಲಿದ್ದ ರೌಡಿಶೀಟರ್ ಆಪಾದನೆಗೆ ತೆರೆ ಎಳೆದರು. ನಗರದಲ್ಲಿ ರೌಡಿಗಳ ಚಟುವಟಿಕೆಯ ಮೇಲೆ ಕಣ್ಣಿಟ್ಟಿದ್ದೇವೆ. ಈಗಾಗಲೇ ಇಬ್ಬರು ರೌಡಿಶೀಟರ್ಗಳನ್ನು ಗಡಿಪಾರು ಮಾಡಿದ್ದೇವೆ. ಇನ್ನು ಐದು ಮಂದಿ ರೌಡಿಶೀಟರ್ಗಳನ್ನು ಗಡಿಪಾರು ಮಾಡಲು ಪರಿಶೀಲನೆ ನಡೆಸುತ್ತಿದ್ದೇವೆ. ಇದರ ಜೊತೆಗೆ ರೌಡಿಶೀಟರ್ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಹೊಸ ವರ್ಷಾಚರಣೆ: ಬೆಂಗಳೂರು ಪೊಲೀಸರಿಗೆ ಎಚ್ಚರಿಕೆ ವಹಿಸಲು ಕಮಿಷನರ್ ಸೂಚನೆ
ವರ್ಷಾಚರಣೆಗೆ ರಾಜ್ಯ ಸರ್ಕಾರದಿಂದ ಗೈಡ್ಲೈನ್: ಹೆಚ್ಚುತ್ತಿರುವ ಕೊರೊನಾ ಸಂಬಂಧಿಸಿದಂತೆ ರಾಜ್ಯಸರ್ಕಾರ ಹೊಸ ಗೈಡ್ಲೈನ್ ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಸಿದೆ. ಹೊಸ ವರ್ಷಾಚರಣೆಗೆ ಬೆಂಗಳೂರಿನ ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಸೇರಿದಂತೆ ಎಲ್ಲೆಲ್ಲ ಸಂಭ್ರಮಾಚರಣೆ ಮಾಡಲಾಗುವುದೋ ಅಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.
ನ್ಯೂ ಇಯರ್ ನಿಮಿತ್ತ ಜನರು ಒಟ್ಟಾಗಿ ಸೇರುವುದರಿಂದ ರಾಜ್ಯದಲ್ಲಿ ಮಾಸ್ಕ್ ಅನ್ನು ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ ಧರಿಸದಿದ್ದರೆ ಸಧ್ಯಕ್ಕೆ ದಂಡ ವಿಧಿಸುವುದಿಲ್ಲ. ಆದರೆ, ಜನರ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸಿ ಮಾಸ್ಕ್ ಧರಿಸುವುದು ಕಡ್ಡಾಯ. ಇದನ್ನು ಎಲ್ಲರೂ ಪಾಲಿಸಿ ಎಂದು ಹೇಳಿದೆ.
ಸಂಭ್ರಮಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗುವುದು. 1 ಗಂಟೆ ಬಳಿಕ ಯಾವುದೇ ಹೊಸ ವರ್ಷಾಚರಣೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ವಿಶೇಷವಾಗಿ ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು ಜನಸಂದಣಿ ಇರುವ ಪ್ರದೇಶಗಳಲ್ಲಿ ಹಾಗೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಿರುವುದು ಒಳಿತು ಎಂದು ತಿಳಿಸಿದೆ. ಅಂತೂ ಸಾಕಷ್ಟು ಮುಂಜಾಗ್ರತಾ ಕ್ರಮಗಳೊಂದಿಗೆ ಈ ಬಾರಿ ಹೊಸ ವರ್ಷ ಆಚರಿಸಲಿದ್ದೇವೆ.
ಹರ್ಷಾಚರಣೆಯಲ್ಲಿ ಭಯೋತ್ಪಾದಕ ಸಂಚಿನ ಶಂಕೆ: ಕಳೆದ ಮೂರು ತಿಂಗಳ ಅವಧಿಯಲ್ಲಿ ಮಂಗಳೂರು ಮತ್ತು ಕೊಯಮತ್ತೂರಿನಲ್ಲಿ ನಡೆದಿರುವ ಬಾಂಬ್ ಸ್ಪೋಟ ಪ್ರಕರಣಗಳು ಕಣ್ಮುಂದೆ ಇರುವುದರಿಂದ ಬೆಂಗಳೂರು ಪೊಲೀಸರಿಗೆ ಅಲರ್ಟ್ ಇರುವಂತೆ ನಗರ ಕಮಿಷನರ್ ಪ್ರತಾಪ್ ರೆಡ್ಡಿ ಸೂಚಿಸಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಯಿಂದ ಯಾವುದೇ ರೀತಿಯಲ್ಲಿ ಮಾಹಿತಿಗಳು ಬಂದಿಲ್ಲ. ಆದರೂ ಸಹ ನಗರದಲ್ಲಿ ಪೊಲೀಸರಿಗೆ ಸೂಕ್ತ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡೇ ಈ ಬಾರಿ ಹೊಸ ವರ್ಷವನ್ನು ಆಚರಿಸುವ ತಯಾರಿಗಳು ನಡೆಯುತ್ತಿವೆ.
ಇದನ್ನೂ ಓದಿ: ರಾಜ್ಯಾದ್ಯಂತ ಇಂದಿನಿಂದ ಮಾಸ್ಕ್ ಕಡ್ಡಾಯ: ರಾಜ್ಯ ಸರ್ಕಾರದಿಂದ ಹೊಸ ಗೈಡ್ಲೈನ್ ಬಿಡುಗಡೆ!