ಮೈಸೂರು: ತಗ್ಗುತ್ತಿರುವ ಕೊರೊನಾದಿಂದ ಸಂತೋಷದಿಂದಿರುವ ನಗರದ ಜನರಿಗೆ ನಗರ ಸಾರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು, ರಾತ್ರಿ 10 ಗಂಟೆಯವರೆಗೆ ಬಸ್ ಸಂಚರಿಸಲಿವೆ.
ಕೊರೊನಾ ಲಾಕ್ಡೌನ್ ಸಡಿಲಿಸಿದ ಮೇಲೆ ಹಂತ ಹಂತವಾಗಿ ಮಧ್ಯಾಹ್ನ ಹಾಗೂ ಸಂಜೆವರೆಗೆ ಸಾರಿಗೆ ಬಸ್ಗಳನ್ನು ಸಂಚರಿಸಲು ನಿರ್ಧರಿಸಲಾಯಿತು. ಅಲ್ಲದೆ ಪ್ರಯಾಣಿಕರು ಕೂಡ ಬಸ್ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ನಗರ ವ್ಯಾಪ್ತಿಯಲ್ಲಿ ಸಾರಿಗೆ ಬಸ್ ಸಂಚಾರದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಲಾಕ್ಡೌನ್ ತೆರವುಗೊಳಿಸಿದ ನಂತರ ಬಸ್ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ನಗರ ಬಸ್ ನಿಲ್ದಾಣದಿಂದ ವಿವಿಧ ಬಡಾವಣೆಗಳಿಗೆ ಬಸ್ಗಳು ಸಂಚರಿಸಲಿವೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.