ಮೈಸೂರು : ಸಕ್ರಿಯ ರಾಜಕಾರಣದಲ್ಲಿ ಕೊನೆಯವರೆಗೂ ಇರುತ್ತೇನೆ. ಈ ಮೂಲಕ ಕಿರಿಯರಿಗೆ ರಾಜಕೀಯ ಮಾರ್ಗದರ್ಶನ ಮಾಡುತ್ತೇನೆ ಎಂದು ಚಾಮರಾಜನಗರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ನಗರದ ಮಾನಸಗಂಗೋತ್ರಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದಲ್ಲಿ ಏರ್ಪಡಿಸಿದ್ದ 'ನಾನು ಎದುರಿಸಿದ 14 ಚುನಾವಣೆಗಳ ಅವಲೋಕನ' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ನನಗೆ ಚುನಾವಣೆ ಸಾಕಾಗಿದೆ, ಆದ್ದರಿಂದ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ. ಆದರೆ ಸಕ್ರಿಯ ರಾಜಕಾರಣದಲ್ಲಿ ಇದ್ದುಕೊಂಡು ಕೆಲಸ ಮಾಡುತ್ತೇನೆ ಎಂದರು.
ಈ ಪುಸ್ತಕದಲ್ಲಿ ನಾನು ಎದುರಿಸಿದ ಚುನಾವಣೆಗಳ ಬಗ್ಗೆ ಬರೆದಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಬಾಲ್ಯದಿಂದ ಇಂದಿನವರೆಗಿನ ರಾಜಕೀಯಗಳ ಬಗ್ಗೆ ದೊಡ್ಡ ಪುಸ್ತಕ ಬರೆಯುತ್ತೇನೆ. ನಂಜನಗೂಡು ಉಪಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಅಂದಿನ ಮುಖ್ಯಮಂತ್ರಿ ಹೇಗೆ ಕುತಂತ್ರ ಮಾಡಿದರು ಎಂಬುದು ಗೊತ್ತಿದೆ. ಅದನ್ನು ಈ ಪುಸ್ತಕದಲ್ಲಿ ಉಲ್ಲೇಖ ಮಾಡಿಲ್ಲ ಎಂದರು.

ನಾನು ಕಂದಾಯ ಸಚಿವನಾಗಿದ್ದಾಗ ಅವಧಿ ಪೂರ್ಣಗೊಳಿಸಿ ಚುನಾವಣೆ ನಿವೃತ್ತಿ ಪಡೆಯಬೇಕು ಎಂದುಕೊಂಡಿದ್ದೆ. ಆದರೆ, ಅಂದು ನಾನಿದ್ದ ಸರ್ಕಾರದವರ ನಡೆಯಿಂದ ಬೇಸರಗೊಂಡಿದ್ದೆ. ಅಭಿಮಾನಿಗಳು ಚುನಾವಣೆ ಗೆದ್ದು ರಾಜಕೀಯ ನಿವೃತ್ತಿ ಪಡೆಯಿರಿ ಎಂದಿದ್ದಕ್ಕೆ, ಕೊನೆ ಕ್ಷಣದಲ್ಲಿ ಸ್ಪರ್ಧೆಗಿಳಿದು ಗೆದ್ದೆ ಎಂದು ಚುನಾವಣಾ ದಿನಗಳನ್ನು ನೆನೆದರು.
ಶುಕ್ರವಾರ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು. ಇದಾದ ಬಳಿಕ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ ಸಂಸದ ವಿ.ಶ್ರೀನಿವಾಸ್ ಪ್ರಸಾದ್