ಮೈಸೂರು : ವರುಣಾಗೆ ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ. ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂಬ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯವಾಡಿದ್ದಾರೆ. ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ?. ಈ ರೀತಿ ದಡ್ಡರು ಹಾಗೂ ಮಾನಸಿಕ ರೋಗಿಗಳು ಮಾತ್ರ ಹೇಳಬೇಕು ಎಂದು ಸಿದ್ದರಾಮಯ್ಯರ ಕಾಲೆಳೆದಿದ್ದಾರೆ.
ಇಂದು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಹೆಚ್ಚಿನ ಸ್ಥಾನ ಗೆಲ್ಲಲಿದ್ದೇವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದಿದ್ದು, ದಿನದಿನಕ್ಕೆ ಬಿಜೆಪಿ ಶಕ್ತಿಯುತವಾಗಿ ಹೊರಹೊಮ್ಮುತ್ತಿದೆ ಎಂದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ವಿಫಲವಾದಾಗ ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ರಚನೆಯಾದಾಗ ಬಿಎಸ್ವೈ ಮುಖ್ಯಮಂತ್ರಿ ಆದರು. ನಂತರ ವಯಸ್ಸಿನ ಕಾರಣದಿಂದ ಹುದ್ದೆಗೆ ರಾಜೀನಾಮೆ ನೀಡಿ, ಅವರೇ ಸೂಚಿಸಿದ ಬಸವರಾಜ ಬೊಮ್ಮಾಯಿಯವರನ್ನ ಮುಖ್ಯಮಂತ್ರಿ ಮಾಡಲಾಯಿತು. ಅವರು ಒಳ್ಳೆಯ ಮನುಷ್ಯ, ಉತ್ತಮ ರೀತಿಯಲ್ಲಿ ಆಡಳಿತ ನೀಡುತ್ತಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಕಾಂಗ್ರೆಸ್ ಸ್ಥಿತಿಯ ಬಗ್ಗೆ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ: ಕಾಂಗ್ರೆಸ್ ನಾಯಕರು ಹೇಳುತ್ತಿರುವಂತೆ ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿಲ್ಲ ಹಾಗೂ ಸಮರ್ಥ ನಾಯಕರೂ ಇಲ್ಲ. ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿ, ಕೊನೆಗೂ ವರುಣಾಗೆ ಬಂದು ನಿಂತಿದ್ದಾರೆ. ಕಾಂಗ್ರೆಸ್ ಸ್ಥಿತಿ ಮದ್ದೂರು ಷೆಟಲ್ ಟ್ರೈನ್ ರೀತಿಯಲ್ಲಿ ಇದೆ. ಅಂದರೆ ಬೆಂಗಳೂರಿನಿಂದ ಹೊರಟ ಟ್ರೈನ್ ಮದ್ದೂರನ್ನ ತಲುಪುತ್ತದೋ ಗೊತ್ತಿಲ್ಲ. ಆ ರೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಿತಿ ಇದೆ. ರಾಜ್ಯಕ್ಕೆ ಬಂದು ಭಾಷಣ ಮಾಡುವ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೋತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಶ್ರೀನಿವಾಸ್ ಪ್ರಸಾದ್ ಹರಿಹಾಯ್ದರು.
ಡಿಕೆಶಿ ಹೇಳಿಕೆಗೆ ತಿರುಗೇಟು : ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಶ್ರೀನಿವಾಸ್ ಪ್ರಸಾದ್, ಡಿ ಕೆ ಶಿವಕುಮಾರ್ ತಲೆ ಮೇಲೆ ಐಟಿ, ಇಡಿ ಕತ್ತಿ ತೂಗಾಡುತ್ತಿದೆ. ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಒಂದು ಪಕ್ಷದ ಅಧ್ಯಕ್ಷರಾದವರು ಈ ರೀತಿ ಮಾತನಾಡುವುದು ಸರಿಯಲ್ಲ. ಇಂತವರು ರಾಜ್ಯದ ಮುಖ್ಯಮಂತ್ರಿ ಆದರೆ ಏನು ಗತಿ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಈ ಅಹಂನಿಂದಲೇ ಚಾಮುಂಡೇಶ್ವರಿಯಲ್ಲಿ 36 ಸಾವಿರ ಮತಗಳಿಂದ ಸೋತರು. ಕಳೆದ ಬಾರಿ ಬಾದಾಮಿ ಕ್ಷೇತ್ರದಲ್ಲಿ ಕೆಲವೇ ಮತಗಳ ಅಂತರದಲ್ಲಿ ಗೆದ್ದರು. ಇನ್ನು ವರುಣಾ ಕ್ಷೇತ್ರದಲ್ಲಿ ಒಂದು ಲಕ್ಷ ವೋಟಗಳ ಅಂತರದಿಂ ಗೆಲ್ಲಲು ಸಾಧ್ಯವೇ ಎಂದು ಶ್ರೀನಿವಾಸ್ ಪ್ರಸಾದ್ ಪ್ರಶ್ನಿಸಿದರು.
ಇದನ್ನೂ ಓದಿ : ರಾಹುಲ್ ಗಾಂಧಿ 224 ಕ್ಷೇತ್ರಕ್ಕೂ ಹೋಗಲಿ, ಅವರು ಹೋದಲೆಲ್ಲ ಕಾಂಗ್ರೆಸ್ ಸೋತಿದೆ: ನಳಿನ್ ಕುಮಾರ್ ಕಟೀಲ್