ಮೈಸೂರು : ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದಿದ್ದಾರೆ. ಆದರೆ ಸಕ್ರಿಯ ರಾಜಕಾರಣದಿಂದ ಅಲ್ಲ. 2023 ಕ್ಕೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದಿದ್ದಾರೆ. ಅವರು ಬಿಜೆಪಿಯ ಏಕೈಕ ಜನ ನಾಯಕ, ಅವರು ರಾಜಕಾರಣ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಈ ಟಿವಿ ಭಾರತ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಪ್ರತಾಪ್ ಸಿಂಹಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ: ಇಂದು ತಮ್ಮ ಜಲದರ್ಶಿನಿ ಅತಿಥಿ ಗೃಹದಲ್ಲಿ ಮೈಸೂರು - ಕೊಡಗು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗಾಗಿ ಸಾಮಾಜಿಕ ಸೇವೆಗಳಿಗೆ ನೀಡುವ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದು ಈಟಿವಿ ಜೊತೆ ಮಾತನಾಡಿದ ಅವರು, ತಾವು ಮಾಡಿರುವ ಒಳ್ಳೆಯ ಕೆಲಸಗಳಿಗೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಅವರು ಅವಾರ್ಡ್ ನೀಡಿದ್ದಾರೆ.
ಇದರಿಂದ ನಾವು ಇನ್ನು ಒಳ್ಳೆಯ ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಜೊತೆಗೆ ಒಳ್ಳೆಯ ಕೆಲಸವನ್ನು ಮಾಡಿರುವ ಬಗ್ಗೆ ಈ ಅವಾರ್ಡ್ ರೂಪದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಂತೋಷವಾಗಿದೆ ಎಂದು ಹೇಳಿದರು.
ಬೆಂಗಳೂರು- ಮೈಸೂರು ನಡುವಿನ ಮೈನ್ ಗ್ಯಾರೇಜ್ ರಸ್ತೆಯನ್ನು ಸಂಚಾರ ಮುಕ್ತಗೊಳಿಸಲು ರಾತ್ರಿ ಹಗಲೆನ್ನದೇ ಕೆಲಸ ನಡೆಯುತ್ತಿದ್ದು ಅಕ್ಟೋಬರ್ ವೇಳೆಗೆ ಸಂಚಾರಕ್ಕೆ ಅನುವು ಮಾಡಲಾಗುವುದು. ಜೊತೆಗೆ ಬೆಂಗಳೂರು - ಮೈಸೂರು ನಡುವಿನ ದಶಪಥ ರಸ್ತೆಯನ್ನು ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಂಡ್ಯ ಬಳಿ ಉದ್ಘಾಟನೆ ಮಾಡಿಸಲಾಗುವುದು ಎಂದು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಸದ ಪ್ರತಾಪ್ ಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡರು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿದ ಸಂಸದರು, ನಾನು ಅತೀ ಹೆಚ್ಚು ಗೌರವ ಕೊಡುವ ವ್ಯಕ್ತಿಯೆಂದರೆ ಬಸವರಾಜ ಬೊಮ್ಮಾಯಿ. ನನ್ನ ಎಲ್ಲ ಪ್ರಸ್ತಾವನೆಗಳಿಗೂ ಮಂಜೂರಾತಿ ನೀಡಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಇಡುವಂತೆ ನಾನು ನೀಡಿದ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಕ್ಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ಇದೇ ವೇಳೆ, ಸಿಎಂ ತಮಗೆ ತರಾಟೆ ತೆಗೆದುಕೊಂಡ ಪ್ರಕರಗಳು ನಡೆದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದರು.
ಓದಿ : ನಮ್ಮ ಪಕ್ಷದ ಬಾಹುಬಲಿ ಜಮೀರ್ ಅಹ್ಮದ್‌ಖಾನ್: ಸತೀಶ ಜಾರಕಿಹೊಳಿ