ಮೈಸೂರು: ರಸ್ತೆ ಬದಿಯಲ್ಲಿರುವ ದೇವಾಲಯಗಳನ್ನು ತೆರವುಗೊಳಿಸುವ ಅಧಿಕಾರಿಗಳು, ಸುಪ್ರೀಂಕೋರ್ಟ್ ಆದೇಶವನ್ನು ಪರಿಶೀಲಿಸಬೇಕು ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ರವಾನಿಸಿದ್ದಾರೆ.
ಸ್ವಪಕ್ಷದ ವಿರುದ್ಧವೇ ಸಂಸದರ ಅಸಮಾಧಾನ
ಮೈಸೂರಿನ ಅಗ್ರಹಾರ ವೃತ್ತದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದ ಆವರಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಅದೇಶ ಪರಾಮರ್ಶೆ ಮಾಡಿ ಮತ್ತೆ ಸುಪ್ರೀಂಕೋರ್ಟ್ಗೆ ಮನವಿ ಮಾಡಬೇಕು. ನಮ್ಮ ಮನವಿಗೆ ಸ್ಪಂದಿಸದೆ ದೇವಸ್ಥಾನ ತೆರವು ಮಾಡಿದ್ರೆ ರಾಜ್ಯಾದ್ಯಂತ ಜನಾಂದೋಲದ ಮೂಲಕ ಉತ್ತರ ಕೊಡುತ್ತೀವಿ ಎಂದು ತಮ್ಮದೇ ಸರ್ಕಾರದ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ನಮ್ಮ ಹತ್ತಿರವೂ ಸುಪ್ರೀಂ ಆದೇಶವಿದೆ’
ಅಧಿಕಾರಿಗಳು ಮಾತೆತ್ತಿದರೆ ಸುಪ್ರೀಂಕೋರ್ಟ್ ಆರ್ಡರ್ ಅಂತಾರೆ. ನಮ್ಮ ಹತ್ತಿರವೂ ಸುಪ್ರೀಂಕೋರ್ಟ್ ಆರ್ಡರ್ ಇದೆ. 2009 ರಲ್ಲಿ ಅದೇ ನ್ಯಾಯಾಲಯ ಮಧ್ಯಂತರ ಆದೇಶ ನೀಡಿದೆ. ದೇವಸ್ಥಾನ, ಮಸೀದಿ ಮತ್ತು ಚರ್ಚ್ಗಳನ್ನು ತಲೆ ಎತ್ತಲು ಬಿಡಬೇಡಿ ಅಂತಾ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೂ, ಮೈಸೂರಿನ ಕ್ಯಾತಮಾರನ ಹಳ್ಳಿಯಲ್ಲಿ ಮಸೀದಿ ಕಟ್ಟಲು ಹೇಗೆ ಬಿಟ್ಟಿದ್ದೀರಿ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು.
ಸಿದ್ದರಾಮಯ್ಯ ಟ್ವೀಟ್ಗೆ ಮೆಚ್ಚುಗೆ
ನಂಜನಗೂಡಿನ ಹುಚ್ಚಗಣಿ ಗ್ರಾಮದಲ್ಲಿ ಮಹಾದೇವಮ್ಮ ದೇವಸ್ಥಾನ ನೆಲಸಮಗೊಳಿಸಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿರುವುದು ಸಂತಸ ತಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಓನಕೆ ಓಬವ್ವ-ಸೋನಿಯಾ ಗಾಂಧಿ ಹೆಣ್ಣಲ್ಲವೇ?
ದರ್ಗಾ ತೆರವುಗೊಳಿಸಲು ಬಿಡುವುದಿಲ್ಲ. ನಾವು ಕೈಗೆ ಬಳೆ ತೊಟ್ಟಿಲ್ಲ ಎಂಬ ಶಾಸಕ ತನ್ವೀರ್ ಸೇಠ್ ಹೇಳಿಕೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದರು. ಹೆಣ್ಣನ್ನು ಅಬಲೆಯಂತೆ ಕಾಣಬೇಡಿ. ಹೈದರಾಲಿ ಸೇನೆ ಚಿತ್ರದುರ್ಗದ ಮೇಲೆ ದಾಳಿ ಮಾಡಿದಾಗ, ಸೈನಿಕರ ರಾಶಿ ರಾಶಿ ಹೆಣ ಉರುಳಿಸಿದ್ದು ಹೆಣ್ಣಲ್ಲವೇ?. ಫ್ರೆಂಚರ ವಿರುದ್ಧ ಹೋರಾಟ ಮಾಡಿದ್ದ ರಾಣಿ ಅಬ್ಬಕ್ಕ ಹೆಣ್ಣಲ್ಲವೇ? ನಾಡ ಅಧಿದೇವತೆ ಚಾಮುಂಡೇಶ್ವರಿ ಹೆಣ್ಣಲ್ಲವೇ?, ಮೈಸೂರು ಸಂಸ್ಥಾನ ಬೆಳೆಯಲು ಕಾರಣರಾದವರು ಹೆಣ್ಣಲ್ಲವೇ? ಎಂದು ಪ್ರಶ್ನಿಸಿದ ಅವರು, ನಿಮ್ಮ(ಕಾಂಗ್ರೆಸ್) ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಕೂಡ ಹೆಣ್ಣಲ್ಲವೇ?. ನಾವು ಹೆಣ್ಣನ್ನು ದೇವರ ಸ್ಥಾನದಲ್ಲಿ ನೋಡುತ್ತೀವಿ. ನಿಮ್ಮ ಥರ (ತನ್ವೀರ್ ಸೇಠ್) ಭೋಗದ ವಸ್ತುವಾಗಿ ನೋಡುವುದಿಲ್ಲ ಎಂದು ಕುಟುಕಿದರು.