ಮೈಸೂರು : ಲೋಕಸಭಾ ಚುನಾವಣೆಯಲ್ಲಿ ಮಹರಾಜರನ್ನು ಬಿಟ್ಟರೆ ನಾನೇ ಅತೀ ಹೆಚ್ಚು ಲೀಡ್‌ನಿಂದ ಗೆದ್ದಿರುವುದು. ಜತೆಗೆ ಮೈಸೂರಿನ ಅಭಿವೃದ್ಧಿಯನ್ನ ನಾನೇ ಹೆಚ್ಚು ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಂದು ತಮ್ಮ ಕಚೇರಿಯ ಮುಂಭಾಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಮನೆ ಮನೆಗೆ ಪೈಪ್ ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಯೋಜನೆಗೆ ಬಿಜೆಪಿ ಶಾಸಕರಾದ ಎಲ್ ನಾಗೇಂದ್ರ ಹಾಗೂ ಶಾಸಕ ಎಸ್ ಎ ರಾಮದಾಸ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಯೋಜನೆಯ ಉದ್ದೇಶ ಹಾಗೂ ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು.
ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮೈಸೂರು ಒಂದು. ಇಲ್ಲಿ ಎಲ್ಲರೂ ದುಡಿಯಲು ಹೋಗುತ್ತಾರೆ. ಆ ಸಂದರ್ಭದಲ್ಲಿ ಸಿಲಿಂಡರ್ ಪಡೆಯಲು ಜನರು ಮನೆಯಲ್ಲೇ ಇರಬೇಕು. ಹಾಗೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ಇದಕ್ಕಿಂತ ಮುಖ್ಯವಾಗಿ ಸಿಲಿಂಡರ್ಗಳಿಂದ ಅಪಾಯ ಹಾಗೂ ಅವಘಡಗಳು ಸಂಭವಿಸುತ್ತವೆ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಿಂತ ಎಲ್ಎನ್ಜಿ ಪೈಪ್‌ಲೈನ್ ಮೂಲಕ ಬರುವ ನ್ಯಾಚುರಲ್ ಗ್ಯಾಸ್ ಕಡಿಮೆ ದರದಲ್ಲಿ ದೊರೆಯುತ್ತದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಚಿತ್ರದುರ್ಗ, ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಗ್ಯಾಸ್ ಅನ್ನ ಪೈಪ್‌ಲೈನ್ ಮೂಲಕ ಸರಬರಾಜು ಮಾಡುವ ಯೋಜನೆಗೆ ಅನುಮತಿ ನೀಡಲಾಗಿದೆ. ಇದು ಪ್ರಧಾನಿಯವರ ಕನಸಾಗಿದೆ. ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.
ಬಿಜೆಪಿ ಶಾಸಕರ ಹೇಳಿಕೆಗೆ ಸಿಂಹ ತಿರುಗೇಟು : ಪೈಪ್‌ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವುದರಿಂದ ರಸ್ತೆಗಳು ಹಾಳಾಗುತ್ತವೆ ಎಂದು ಈ ಯೋಜನೆಗೆ ರಾಮದಾಸ್ ಹಾಗೂ ಎಲ್ ನಾಗೇಂದ್ರ ಆಕ್ಷೇಪ ವ್ಯಕ್ತಪಡಿಸಿ, ಜನವರಿ 27 ರಂದು ಪಾಲಿಕೆ ಸಭೆಗೆ ಗೈರಾಗಿದ್ದು ಸರಿಯಲ್ಲ. ಟೆಲಿಕಾಂ ಕೇಬಲ್ ಹಾಕಲು ರಸ್ತೆ ಅಗೆಯುತ್ತಾರೆ, ಅದೇ ರೀತಿ ಗ್ಯಾಸ್ ಪೈಪ್ ಲೈನ್ಗೆ ರಸ್ತೆ ಅಗೆದು ಜಾಗವನ್ನು ಅವರೇ ಸರಿ ಪಡಿಸುತ್ತಾರೆ. ಈ ವಿಚಾರದಲ್ಲಿ ಶಾಸಕರ ಹೇಳಿಕೆ ಸರಿಯಲ್ಲ. ರಾಮದಾಸ್ ಪ್ರಧಾನಮಂತ್ರಿ ನರೇಂದ್ರ ಮೋದಿಗಿಂತ ರಾಜಕೀಯದಲ್ಲಿ ಹಿರಿಯವರು ಎಂದು ಟೀಕಿಸಿದರು. ಜೊತೆಗೆ ನಾಗೇಂದ್ರ ಬಿಜೆಪಿ ಪಕ್ಷ ಹಾಗೂ ನರೇಂದ್ರ ಮೋದಿಯವರ ಹೆಸರಿನಿಂದ ಗೆದ್ದಿರುವುದು. ಕಳೆದ ಬಾರಿ ಚುನಾವಣೆಯಲ್ಲಿ ತಾವು ವಾಸವಿರುವ ವಾರ್ಡ್‌ನಲ್ಲೇ ಕಡಿಮೆ ಮತ ಪಡೆದಿದ್ದಾರೆ. ಈ ಬಗ್ಗೆ ಯೋಚಿಸಲಿ ಎಂದು ತಿರುಗೇಟು ನೀಡಿದರು.
ಮಹರಾಜರ ನಂತರ ಹೆಚ್ಚು ಮತಗಳಿಂದ ಗೆದ್ದವನು ನಾನೇ : ಮೈಸೂರು ಮಹಾರಾಜರ ನಂತರ ಅತೀ ಹೆಚ್ಚು ಮತಗಳಿಂದ ಗೆದ್ದವನು ನಾನು. ಇದರ ಜೊತೆಗೆ ಅತೀ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನ ನಾನು ಮಾಡಿದ್ದೇನೆ. ರಸ್ತೆ, ವಿಮಾನ ನಿಲ್ದಾಣ, ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರದ ಹಲವು ಕೆಲಸಗಳನ್ನ ಮಾಡಿದ್ದೇನೆ. ಆದರೆ, ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಇಬ್ಬರು ಬಿಜೆಪಿ ಶಾಸಕರು ಅಭಿವೃದ್ಧಿಯ ಹರಿಕಾರರು ಎಂಬ ಭ್ರಮೆಯಲ್ಲಿದ್ದಾರೆ. ಇವರು ತಮ್ಮ ಕ್ಷೇತ್ರದ ಸಮಸ್ಯೆಗಳನ್ನ ಒಮ್ಮೆ ನೋಡಲಿ. ಅದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಹೇಳಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ