ಮೈಸೂರು: ವಾಹನ ತೆಗೆದುಕೊಳ್ಳಲು ಕೊಡಿಸಿದ ಸಾಲದ ಕಂತು ತುಂಬುವ ವಿಚಾರಕ್ಕೆ ಜಗಳ ನಡೆದು ಮಗನೇ ತಾಯಿಯನ್ನು ಜೀಪ್ ಹತ್ತಿಸಿ ಕೊಂದಿದ್ದಾನೆ. ಆರೋಪಿ ಮಗನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿ ಆರ್.ಚೇತನ್ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಸೂಳೆಕೋಟೆ (ಹನುಮಂತಪುರ) ಗ್ರಾಮದಲ್ಲಿ ಗುರುವಾರ ನಾಗಮ್ಮ (65) ಎಂಬ ಮಹಿಳೆಯನ್ನು ಆಕೆಯ ಮಗ ಹೇಮರಾಜ್(45) ಎಂಬಾತನೇ ಜೀಪ್ ಹತ್ತಿಸಿ ಕೊಲೆ ಮಾಡಿದ್ದ. ಹಣಕಾಸು ವಿಚಾರವಾಗಿ ತಾಯಿಯನ್ನು ಜೀಪ್‌ನಿಂದ ಗುದ್ದಿ ಕೊಲೆ ಮಾಡಿದ ಪಾಪಿ ಪುತ್ರನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇದನ್ನೂ ಓದಿ: ವಾಕಿಂಗ್ಗೆ ಹೋದವಳು ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ.. ಬೆಂಗಳೂರಲ್ಲಿ ಡೆತ್ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ಆರೋಪಿಯು ಈತ ತೂಫಾನ್ ವಾಹನ ತೆಗೆದುಕೊಳ್ಳಲು ತನ್ನ ತಾಯಿಯ ಮುಖೇನ ಖಾಸಗಿ ಫೈನಾನ್ಸ್ ಮೂಲಕ ಸಾಲ ತೆಗೆದುಕೊಂಡಿದ್ದ. ಆದರೆ, ಸಾಲದ ಕಂತುಗಳನ್ನು ಕಟ್ಟುವಂತೆ ಕೇಳಿದರೆ ಅಮ್ಮನೊಂದಿಗೆ ಜಗಳವಾಡುತ್ತಿದ್ದ. ಮತ್ತೆ ನಾಗಮ್ಮ ಈ ಬಗ್ಗೆ ಕೇಳಿದ್ಧಾರೆ, ಇದರಿಂದ ಕುಪಿತಗೊಂಡ ಹೇಮರಾಜ್, ತಾಯಿಯು ರಸ್ತೆಯಲ್ಲಿ ಹೋಗುತ್ತಿರುವಾಗಲೇ ಅದೇ ತೂಫಾನ್ ವಾಹನ ಹತ್ತಿಸಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಮೃತರ ಸಹೋದರಿ ದೂರು ನೀಡಿದ್ದಾರೆ ಎಂದು ಎಸ್ಪಿ ಆರ್.ಚೇತನ್ ಮಾಹಿತಿ ನೀಡಿದರು.
ಹೇಮರಾಜ್‌ನನ್ನು ಬೆಟ್ಟದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ಪೂರ್ವಾಪರ ತಿಳಿದುಕೊಳ್ಳಲು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದರು.